ಬಂಟ್ವಾಳ – ವಿವಿಧ ಪಕ್ಷಗಳ 20ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಗೆ ಸೇರ್ಪಡೆ…

ಬಂಟ್ವಾಳ: ಬಂಟ್ವಾಳ ಕ್ಷೇತ್ರದ ನಾವೂರು, ದೇವಸ್ಯಪಡೂರು, ಅಮ್ಟಾಡಿ ಹಾಗೂ ಬಡಗಕಜೆಕಾರು ಗ್ರಾಮಗಳ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ 20ಕ್ಕೂ ಅಧಿಕ ಕಾರ್ಯಕರ್ತರು ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯ ತತ್ವ, ಸಿದ್ಧಾಂತಗಳನ್ನು ಒಪ್ಪಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಉಪಸ್ಥಿತಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ನಾವೂರು ಗ್ರಾ.ಪಂ.ನ ಕಾಂಗ್ರೆಸ್ ಬೆಂಬಲಿತ ಸದಸ್ಯ ನಾರಾಯಣ ಅವರು ಸೇರಿದಂತೆ ಅವರ ನೇತೃತ್ವದಲ್ಲಿ ಪ್ರಕಾಶ್ ಸಿಕ್ವೇರಾ, ವಿಲಿಯಂ ಸಿಕ್ವೇರಾ, ಎಡ್ವಿನ್ ಸಿಕ್ವೇರಾ, ಡೇನಿಯಲ್ ಪಿಂಟೋ, ಲೆನ್ಸಿ ಸಿಕ್ವೇರಾ, ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಈಗ ಅಮ್ಟಾಡಿ ಗ್ರಾಮ ನಿವಾಸಿಯಾಗಿರುವ ಕವಿತಾ ಮೋಹನದಾಸ ಪೂಜಾರಿ, ಬಡಗಕಜೆಕಾರು ಗ್ರಾಮದ ಕೃಷ್ಣಪ್ಪ ಪೂಜಾರಿ ಪಾರೊಟ್ಟು, ಚಂದ್ರಹಾಸ ಪಾರೊಟ್ಟು, ಸಂದೇಶ್ ಪಾರೊಟ್ಟು, ದಿನೇಶ್ ಪಾರೊಟ್ಟು, ಶಿವಪ್ಪ ನರ್ಸಿಕುಮೇರು ನೆಕ್ಕಿಲಾಡಿ, ವಸಂತ ಮಾಡಪಲಿಕೆ ಅವರು ಬಿಜೆಪಿಗೆ ಸೇರ್ಪಡೆಗೊಂಡರು.
ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಶಾಲು ಹಾಕಿ ಸ್ವಾಗತಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಾತನಾಡಿ, ಬಂಟ್ವಾಳ ಸಾಕಷ್ಟು ಮಂದಿ ಇತರ ಪಕ್ಷಗಳ ನಾಯಕರು ಬಿಜೆಪಿಯ ತತ್ವ, ಸಿದ್ಧಾಂತವನ್ನು ಒಪ್ಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಬೆಂಬಲಿಸಿ ಬಿಜೆಪಿ ಕುಟುಂಬವನ್ನು ಸೇರಿ ಪಕ್ಷವನ್ನು ಬಲಪಡಿಸುವ ಕಾರ್ಯ ಮಾಡಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಪ್ರಧಾನಿಯವರ ನೇತೃತ್ವದಲ್ಲಿ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಕಾರ್ಯ ನಡೆಯುತ್ತಿದ್ದು, 70 ವರ್ಷಗಳ ದುರಾಡಳಿತಕ್ಕೆ ಮುಕ್ತಿ ಸಿಗುತ್ತಿದೆ. ಪ್ರಸ್ತುತ ಲಕ್ಷಾಂತರ ಪಿಪಿಇ ಕಿಟ್‌ಗಳು ದೇಶದಲ್ಲೇ ಉತ್ಪಾದನೆಯಾಗುತ್ತಿದ್ದು, ಬಂಟ್ವಾಳ ದಂತಹ ಸಾಮಾನ್ಯ ಆಸ್ಪತ್ರೆಯಲ್ಲೂ ವೆಂಟಿಲೇಟರ್, ಆಕ್ಸಿಜನ್ ಘಟಕಗಳು ಕಾರ್ಯಾನಿರ್ವಹಿಸುತ್ತಿದೆ. ವ್ಯಾಕ್ಸಿನ್ ಕುರಿತು ಅಪಪ್ರಚಾರ ಮಾಡಿದವರು ಪ್ರಾರಂಭದಲ್ಲಿ ಕದ್ದು ವ್ಯಾಕ್ಸಿನ್ ತೆಗೆದುಕೊಂಡಿರುವುದನ್ನು ಕೂಡ ಕಂಡಿದ್ದೇವೆ. ಈಗ 90 ಕೋಟಿ ಭಾರತೀಯರಿಗೆ ಲಸಿಕೆ ಸಿಕಿದ್ದು, ಬಂಟ್ವಾಳವು ಕೊರೊನಾ ಮುಕ್ತಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಸ್ಥಾಪನೆಯ ಕಾಲಘಟ್ಟದಿಂದಲೂ ಬಿಜೆಪಿ ಪಕ್ಷವು ತತ್ವ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳದೆ ಬೆಳೆದು ಬಂದಿದೆ. ಪಕ್ಷದ ಹಿಂದಿನ ಮತ್ತು ಇಂದಿನ ಸ್ಥಿತಿ ಎಲ್ಲರಿಗೂ ತಿಳಿದಿದ್ದು, ಪ್ರಧಾನಿಯವರ ನಾಯಕತ್ವವನ್ನು ವಿದೇಶಿಗರು ಕೂಡ ಒಪ್ಪಿಕೊಂಡಿದ್ದಾರೆ. ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಅವರು ಕ್ಷೇತ್ರದ ಸರ್ವ ಜನತೆಯ ಶಾಸಕನಾಗಿ ರಾಜಧರ್ಮವನ್ನು ಪಾಲಿಸುತ್ತಾ ಬಂದಿದ್ದಾರೆ. ಅವರ ಅಭಿವೃದ್ಧಿ ಕಾರ್ಯ ಕಂಡು ವಿವಿಧ ಪಕ್ಷಗಳನ್ನು ತೊರೆದು ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ ಎಂದರು.
ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ ಅವರು ಬಿಜೆಪಿಗೆ ಸೇರ್ಪಡೆಗೊಂಡವರ ವಿವರ ನೀಡಿದರು. ಪಕ್ಷದ ಪದಾಧಿಕಾರಿಗಳಾದ ರೊನಾಲ್ಡ್ ಡಿಸೋಜ, ಸುದರ್ಶನ್ ಬಜ, ಚಿದಾನಂದ ರೈ ಕಕ್ಯ, ಪುರುಷೋತ್ತಮ ಶೆಟ್ಟಿ ವಾಮದಪದವು, ಸದಾನಂದ ನಾವೂರು, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ ಮೊದಲಾದವರಿದ್ದರು.
ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿ, ವಂದಿಸಿದರು.

Sponsors

Related Articles

Back to top button