ಡಾ.ನಾ.ಮೊಗಸಾಲೆಯವರಿಗೆ ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ….

ಬಂಟ್ವಾಳ: 1944ರಲ್ಲಿ ಕನ್ನಡದ ನೆಲ ಕಾಸರಗೋಡಿನ ಕೋಳ್ಯೂರು ಎಂಬಲ್ಲಿ ಡಾ.ನಾ.ಮೊಗಸಾಲೆ ಜನಿಸಿದರು. ಸ್ಥಳೀಯ ಶಾಲೆಗಳಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ಮಾಡಿ, ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರೈಸಿ, 1965ರಲ್ಲಿ ಕಾರ್ಕಳದ ಕಾಂತಾವರ ಎಂಬ ಪುಟ್ಟ ಹಳ್ಳಿಗೆ ಬಂದು ವೈದ್ಯಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಾ ಸಾಹಿತಿಯಾಗಿ ಬೆಳೆದು ನಿಂತವರು.
1965 ರಿಂದ 2002ರ ತನಕ ವೃತ್ತಿ ಜೀವನದ ಜೊತೆಜೊತೆಯಲ್ಲೇ ಕನ್ನಡದ ಸೇವೆಯನ್ನು ಮಾಡುತ್ತಾ ಬಂದಿರುವ ಮೊಗಸಾಲೆಯವರ ಅಪ್ರತಿಮ ಸಾಧನೆ ಶ್ಲಾಘನೀಯವಾಗಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು 50ಕ್ಕೂ ಮಿಕ್ಕು ಕೃತಿಗಳನ್ನು ಕೊಡುಗೆಗಳಾಗಿ ಕೊಟ್ಟಿರುವ ಇವರು ವರ್ತಮಾನದ ಮುಖಗಳು, ಪಲ್ಲವಿ , ಮೊಗಸಾಲೆಯ ನೆನಪುಗಳು , ಪ್ರಭವ, ಸ್ವಂತಾವತಾರ, ನೆಲದ ನೆರಳು, ಇದಲ್ಲ ಇದಲ್ಲ, ಅರುವತ್ತರ ತೇರು(ಸಮಗ್ರ ಕಾವ್ಯ), ಇಹಪರದ ಕೊಳ, ಕಾಮನೆಯ ಬೆಡಗು, ದೇವರು ಮತ್ತೆ ಮತ್ತೆ, ಪೂರ್ವೋತ್ತರ (ಸಮಗ್ರ ಕಾವ್ಯ ಸಂಗ್ರಹದ ಪೂರ್ವಭಾಗ) ಎಂಬ ಅಮೂಲ್ಯವಾದ ಕವನ ಸಂಗ್ರಹದ ಹೊತ್ತಿಗೆಗಳನ್ನು ಪ್ರಕಟಿಸಿರುತ್ತಾರೆ. ಮಣ್ಣಿನ ಮಕ್ಕಳು, ಅನಂತ ಕನಸಿನ ಬಳ್ಳಿ, ನನ್ನದಲ್ಲದ್ದು, ಹದ್ದು, ಧಾತು, ವಿಶ್ವಂಭರ ಮೊದಲಾದ 18 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಆಶಾಂಕುರ, ಹಸಿರುಕೋಲು, ನೇಪಥ್ಯ ಓದು,ಶಬ್ದ ನಿಶಬ್ದಗಳ ನಡುವೆ. ಶರಣರ ನಡೆಹೆಜ್ಜೆ ಇತ್ಯಾದಿ ಏಳು ಲೇಖನಗಳ ಸಂಕಲನಗಳನ್ನು ನೀಡಿದ್ದಾರೆ. ವೃತ್ತಿ ಸಂಬಂಧಿತ ವೈದ್ಯಕೀಯ ಶಾಸ್ತ್ರಕ್ಕೂ ಕೃತಿಗಳನ್ನು ರಚಿಸಿದ್ದಾರೆ. ನಿಮ್ಮ ಕೈಯಲ್ಲೇ ನಿಮ್ಮ ಆರೋಗ್ಯ, ದಾಂಪತ್ಯ ಯೋಗ ,ಹೆಣ್ಣು ಹೆಣ್ಣನ್ನು ಅರಿಯುವ ಬಗೆ ಇತ್ಯಾದಿ ಅರು ಕೃತಿಗಳು ಮೊಗಸಾಲೆಯವರ ಸಮಗ್ರ ವೈದ್ಯ ಸಾಹಿತ್ಯ ಎಂಬ ಶೀರ್ಷಿಕೆಯಡಿ ಕೃತಿ ಸಂಪುಟ ಪ್ರಕಟವಾಗಿದೆ.
ಮಹತ್ಯ ಪೂರ್ಣವಾದ ಕೃತಿಗಳು ತೆಲುಗು, ಹಿಂದಿ ಮರಾಠಿ, ಇಂಗ್ಲೀಷ್, ಮಲಯಾಳಂ ಭಾಷೆಗಳಿಗೆ ಅನುವಾದಗೊಂಡಿರುವುದು ಇವರ ಸಾಹಿತ್ಯದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಸಾಹಿತ್ಯದ ಜೊತೆಗೆ ಸಂಘಟಕಕಾರರಾಗಿ ಗುರುತಿಸಲ್ಪಟ್ಟ ಮೊಗಸಾಲೆಯವರು 1976 ರಲ್ಲಿ ಕಾಂತಾವರ ಕನ್ನಡ ಸಂಘವನ್ನು 1978ರಲ್ಲಿ ವರ್ದಮಾನ ಸಾಹಿತ್ಯ ಪೀಠ, 2010ರಲ್ಲಿ ಅಲ್ಲಮ ಪ್ರಭು ಪೀಠವನ್ನು ಕಟ್ಟಿ ಬೆಳೆಸಿದ್ದಾರೆ.ಕಾಂತಾವರ ಕನ್ನಡ ಸಂಘವು 30ಕ್ಕೆ ಕಾಲಿಟ್ಟ ನೆನಪಿನಲ್ಲಿ ನಾಡಿಗೆ ನಮಸ್ಕಾರದ ಮೂಲಕ ಕನಿಷ್ಟ 30 ಪುಸ್ತಕಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪ್ರಕಟಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬಸವ ರಾಷ್ಟ್ರೀಯ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನಕ ಶ್ರೀ ಪ್ರಶಸ್ತಿ, ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿ ಇದ್ದವರು. ಇವರ ಸಾಹಿತ್ಯ ಕೃತಿಗಳಲ್ಲಿ ಕೆಲವು ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿದ್ದು ಡಾಕ್ಟರೇಟ್ ಅಧ್ಯಯನವು ನಡೆದಿರುವುದು ಇವರ ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿದಿದೆ. 2004ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಈ ವರ್ಷ ಕನ್ನಡ ಕಲ್ಹಣ ಖ್ಯಾತಿಯ ನೀರ್ಪಾಜೆ ಭೀಮಭಟ್ಟ ಪ್ರಶಸ್ತಿ ನೀಡಲಾಗುತ್ತಿದೆ.

Sponsors

Related Articles

Leave a Reply

Your email address will not be published. Required fields are marked *

Back to top button