ಶಿಕ್ಷಕಿ ಸುಮಾ ಹಡಪದ ಅವರಿಗೆ ಆದಿಕವಿ ಪಂಪ ಸದ್ಭಾವನ ರಾಜ್ಯ ಪ್ರಶಸ್ತಿ…

ಹಳಿಯಾಳ: ತಮ್ಮ ವಿಶಿಷ್ಟ ರೀತಿಯ ಬೋಧನೆಯ ಮೂಲಕ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ,ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ, ಬೋಧಕ ಬೋಧಕೇತರ ಸಿಬ್ಬಂದಿಗಳೊಂದಿಗೆ ಉತ್ತಮ ಒಡನಾಟ ಹೊಂದಿ ,ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡು ವಿಶಿಷ್ಟ ಸಾಧನೆಗೈದಿರುವ ಶಿಕ್ಷಕಿ ಸುಮಾ ಹಡಪದ ಅವರು ಆದಿಕವಿ ಪಂಪ ಸದ್ಭಾವನ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದರೂ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಗೀತದ ಏರಿಳಿತಗಳನ್ನು ಕಲಿತು ವಿವಿಧ ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಇವರ ಸಾಧನೆಯನ್ನು ಗುರುತಿಸಿ ಮುಂಡಗೋಡಿನ ವಿಶಿಷ್ಟ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆ.7 ರಂದು ನವಲಗುಂದದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಂಪ ಸದ್ಭಾವನಾ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯವರಾದ ಸುಮಾ ಹಡಪದ ಅವರು ಕಳೆದ 21 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಸಮಾಜ ಶಾಸ್ತ್ರ ವಿಷಯದಲ್ಲಿ ಎಮ್.ಎ ಹಾಗೂ ಹಿಂದುಸ್ತಾನಿ ಸಂಗೀತದಲ್ಲಿ ವಿದ್ವತ್ ಶಿಕ್ಷಣವನ್ನು ಪೂರೈಸಿ ಪ್ರಸ್ತುತ ಹಳಿಯಾಳ ಪಟ್ಟಣದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ 3 ನಂಬರ್ ಶಾಲೆಯಲ್ಲಿ ಗಣಿತ ಮತ್ತು ಇಂಗ್ಲಿಷ್ ವಿಷಯವದ ಜೊತೆಗೆ ನಲಿಕಲಿ ಎಂಬ ಪಠ್ಯವನ್ನು ಸಹ ಬೋಧಿಸುತ್ತಿದ್ದಾರೆ.

ಇವರ ಪತಿ ಬಸವರಾಜ ಹಡಪದ ಅವರು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದು ತಾಲೂಕಿನ ನೀರಲಗಾ ಗ್ರಾಮದ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾ ಅವರ ತಂದೆಯವರಾದ ಮಹಾಲಿಂಗರಾಜ ಗವಾಯಿಗಳು ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಇವರ ಮಕ್ಕಳು ಸಹ ವ್ಯಾಯಲಿನ್, ತಬಲಾ , ಹಾರ್ಮೋನಿಯಂ, ಭರತನಾಟ್ಯ ಕಲೆಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ 15 ವರ್ಷಗಳ ಕಾಲ ಸಂಗೀತ ಕಾರ್ಯಕ್ರಮ,ಸುಗಮ ಸಂಗೀತ,ಈ ಟಿವಿ ಹಾಡಿಗೊಂದು ಹಾಡು, ಅಕ್ಕ ನಾಗಮ್ಮ ಬಳಗದ ಸಂಗೀತ ಮಾರ್ಗದರ್ಶಕಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಪ್ರತಿವಾರವೂ ಸಂಗೀತದ ಕುರಿತು ಆಸಕ್ತಿವುಳ್ಳ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿದ್ದಾರೆ.ಅಷ್ಟೇ ಅಲ್ಲದೆ ಹಾಡು, ಕವನ, ಆಧುನಿಕ ವಚನ, ಹನಿಗವನ,ಚಿತ್ರ ಕಲೆ,ಟಂಕಾ ಚಟುವಟಿಕೆಗಳ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಮಕ್ಕಳಲ್ಲಿರುವ ಸೃಜನಾತ್ಮಕ ಕಲೆಗಳನ್ನು ಹೊರತರಬೇಕೆಂದು ಕಲಾತ್ಸೋವ ತಂಡದ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅದರ ಜೊತೆಗೆ ಪ್ರತಿ ತಿಂಗಳು ಮಾಸಿಕ ಶಿವಾನುಭವ ಕಾರ್ಯಕ್ರಮವನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಡೆಸುತ್ತಾ ಸಂಗೀತದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಸಹ ಪಠ್ಯ ಚಟುವಟಿಕೆಗಳಲ್ಲಿ ಕರುನಾಡ ಸಿರಿ ರಾಜ್ಯ ಪ್ರಶಸ್ತಿ, ಸಂಗೀತ ಕ್ಷೇತ್ರದ ಸಾಧನೆಗೆ ಕರುನಾಡ ಕಲಾ ರತ್ನ, ಪಂಪ ಸದ್ಭಾವನಾ ರಾಜ್ಯ ಪ್ರಶಸ್ತಿ, ಹಾಗೂ ಇನ್ನಿತರ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಇವರನ್ನರಸಿ ಬಂದಿವೆ.ಸ್ಪಂದನ ಸಿರಿ ವೇದಿಕೆ, ವಿಚಾರ ಮಂಟಪ ಹಾಗೂ ಲೋಕ ಪ್ರಕಾಶನ ಸಂಸ್ಥೆಯ ಸದಸ್ಯರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಮ್ಮ ತಂದೆಯವರಿಂದಲೇ ನಮಗೆ ಸಂಗೀತ ಶಿಕ್ಷಣ ದೊರೆತಿದೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯುತ್ತಿದ್ದೇವೆ. ಇಂದಿನ ಯುವ ಪೀಳಿಗೆ ಕೇವಲ ಓದು ಬರಹದಲ್ಲಿ ತೊಡಗಿಕೊಳ್ಳದೇ ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡು ವಿಶಿಷ್ಟ ಸಾಧನೆಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಸುಮಾ ಹಡಪದ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Sponsors

Related Articles

Back to top button