ಕೇಂದ್ರ ಕೃಷಿ ಮಸೂದೆಗಳ ತಿದ್ದುಪಡಿ ಅರಿಕೆ ಮತ್ತು ಅವಲೋಕನ ಕಾರ್ಯಕ್ರಮ…

ಪುತ್ತೂರು: ಎಲ್ಲರೂ ಅಂದುಕೊಂಡಂತೆ ಕೇಂದ್ರ ಸರ್ಕಾರವು ಇಡೀ ಕೃಷಿನೀತಿಯನ್ನೇ ಬದಲಿಸಲಿಲ್ಲ. ಆದರೆ ಅದರ ಕೆಲವೊಂದು ಅಂಶಗಳ ತಿದ್ದುಪಡಿಯನ್ನಷ್ಟೇ ಮಾಡಿದೆ ಎಂದು ಕೃಷಿಕ ಹಾಗೂ ಕೃಷಿ ಅರ್ಥಶಾಸ್ತ್ರಜ್ಞ ಬಂಗಾರಡ್ಕ ವಿಶ್ವೇಶ್ವರ ಭಟ್ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ‘ಕೇಂದ್ರ ಕೃಷಿ ಮಸೂದೆಗಳ ತಿದ್ದುಪಡಿ ಅರಿಕೆ ಮತ್ತು ಅವಲೋಕನ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತಾಡಿದರು. ಸರ್ಕಾರಿ ಯಂತ್ರಗಳು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಯಾವುದೇ ಕಾಯಿದೆಗಳು ಫಲ ನೀಡುತ್ತದೆ. ಕಾಲ ಬದಲಾದಂತೆ ಜೀವನಕ್ರಮಗಳೂ ಬದಲಾಗುತ್ತವೆ. ಆಗ ಹಳೆಯ ಕ್ರಮಗಳನ್ನು ಹೊಸತನ್ನಾಗಿಸುವುದು ಅನಿವಾರ್ಯ ಎಂದರು. ನೂತನ ನೀತಿಯಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ, ಬದಲಾಗಿ ಮಧ್ಯವರ್ತಿಗಳ ಪಾಲ್ಗೊಳ್ಳುವಿಕೆಯು ಕಡಿಮೆಯಾಗಿ ಬೆಳೆಗಳಿಗೆ ಹೆಚ್ಚಿನ ದರ ಲಭಿಸುತ್ತದೆ. ರೈತರು ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಡುವಿನ ಒಪ್ಪಂದದಿಂದ ಕೃಷಿಕ ಯಾರದ್ದೇ ಅಡಿಯಾಳಾಗಬೇಕಾಗಿಲ್ಲ, ಬದಲಾಗಿ ಅವನ ಜಮೀನಿನಿಂದಲೇ ಮಾರಾಟದ ವ್ಯವಸ್ಥೆಯನ್ನು ಕಂಪೆನಿಗಳು ಮಾಡುತ್ತವೆ. ಎಪಿಎಂಸಿ ಗಳಲ್ಲಿ ಮಾರಾಟದ ಪ್ರಮಾಣ ಅತಿಕಡಿಮೆ ಹಾಗೂ ಅದು ರೈತ ಸ್ನೇಹಿಯಾಗಿ ಉಳಿದಿಲ್ಲ ಆದರೂ ನೂತನ ನೀತಿಗಳಿಂದ ಎಪಿಎಂಸಿಗಳಿಗೆ ಯಾವುದೇ ಧಕ್ಕೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಅವಲೋಕನ ಕಾರ್ಯಕ್ರಮವನ್ನು ನಡೆಸಿಕೊಟ್ಟ ವಿವೇಕಾನಂದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶ್ರೀಶಕುಮಾರ್ ಮಾತನಾಡಿ ತಿದ್ದುಪಡಿ ಅಥವಾ ಬದಲಾವಣೆ ಎಂದ ಮೇಲೆ ಅದರ ಬಗ್ಗೆ ಚರ್ಚೆಗಳಾಗುವುದು ಸಹಜ. ನಿರ್ಲಿಪ್ತ ಮನೋಭಾವದಿಂದ ಇದನ್ನು ಅಭ್ಯಸಿಸಿದರೆ ಮಾತ್ರ ಇದರ ಸಾದಕ ಬಾಧಕಗಳು ತಿಳಿಯಬಹುದು. ಈ ನೀತಿಯ ಪ್ರಕಾರ ರೈತರು ತಮ್ಮ ಬೆಳೆಗಳನ್ನು ದೇಶದ ಯಾವುದೇ ಭಾಗದಲ್ಲಿ ಮಾರಬಹುದು. ಈ ವ್ಯವಸ್ಥೆಯ ಮೇಲೆ ರಾಜ್ಯಸರ್ಕಾರಗಳು ಯಾವುದೇ ರೀತಿಯ ನಿಯಂತ್ರಣವನ್ನು ಸಾಧಿಸುವಂತಿಲ್ಲ. ತಾವು ಬೆಳೆದ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗಬಹುದೋ ಅಥವಾ ಕೃಷಿಕರು ನಿಯಂತ್ರಣಕ್ಕೆ ಒಳಪಡುತ್ತಾರೋ ಎನ್ನುವ ಸಂದೇಹಗಳಿಗೆ ಅರ್ಥವಿಲ್ಲ ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ ವಿರೋಧಗಳು ಸಾಮಾನ್ಯ. ರಚನಾತ್ಮ ದೃಷ್ಟಿಕೋನದಿಂದ ನೋಡಿದಾಗ ಮಾತ್ರ ಅದರ ಒಳ ಅರಿವು ನಮಗಾಗುತ್ತದೆ . ಕಾಲೇಜಿನ ಸಮಾಜಮುಖೀ ಕಾರ್ಯಕ್ಕನುಗುಣವಾಗಿ ರೈತಸ್ನೇಹೀ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು ವಿಧೇಯಕದ ಬಗೆಗಿನ ಸಂದೇಹಗಳನ್ನು ಎಲ್ಲರೂ ಪರಿಹರಿಸಿಕೊಳ್ಳುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್.ಪಿ ಮಾತನಾಡಿ ದೇಶ ಅಭಿವೃದ್ಧಿಯಾದಂತೆ ಅನೇಕ ನೀತಿಗಳು ಕಾನೂನುಗಳು ಬದಲಾಗುತ್ತಲೇ ಇರುತ್ತವೆ, ಇದು ಅನಿವಾರ್ಯವೂ ಹೌದು. ಅದರಂತೆ ಕೃಷಿ ಮಸೂದೆಯಲ್ಲಿ ಕೆಲವು ತಿದ್ದುಪಡಿಗಳಾಗಿವೆ. ಈ ವಿಷಯದ ಬಗ್ಗೆ ರೈತರಿಗಿರುವ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆದಿದೆ ಇದು ಅತ್ಯಂತ ಸಂತಸ ವಿಷಯ. ಸ್ವಾಮೀ ವಿವೇಕಾನಂದರ ಧ್ಯೇಯಗಳಿಗೆ ಅನುಗುಣವಾಗಿ ನಡೆಯುತ್ತಿರುವ ಈ ವಿದ್ಯಾಸಂಸ್ಥೆಯು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ರೈತರ ಮತ್ತು ಗ್ರಾಮೀಣ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ಸದಾ ನಿರತವಾಗಿದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ .ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ .ಟಿ.ಎಸ್.ಸುಬ್ರಮಣ್ಯ ಭಟ್, ಪುತ್ತೂರು ಬ್ಲಾಕ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷರುಗಳಾದ ಕಾವು ಹೇಮನಾಥ ಶೆಟ್ಟಿ, ಪ್ರವೀಣ್‍ಚಂದ್ರ ಆಳ್ವ, ಕ್ಯಾಂಪ್ಕೋ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ, ಪುತ್ತೂರು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಸುರೇಶ್ ಕಣ್ಣಾರಾಯ, ಕೃಷಿಕರಾದ ಸೇಡಿಯಾಪು ಜನಾರ್ಧನ ಭಟ್, ಎ.ಪಿ.ಸದಾಶಿವ ಮರಿಕೆ, ಜಯರಾಮ ಕೆದಿಲಾಯ ಶಿಬರ, ಮೋಹನ ಪಕ್ಕಳ, ವೆಂಕಟ್ರಮಣ ಭಟ್ ಹಾರೆಕೆರೆ, ಪ್ರವೀಣ್‍ಚಂದ್ರ ಆಳ್ವ ಕೊಡಿಂಬಾಡಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಪ್ರೊ.ಶ್ರೀಕಾಂತ್ ರಾವ್ ವಂದಿಸಿದರು. ಪ್ರೊ.ನಿರುಪಮಾ ಮತ್ತು ಪ್ರೊ.ಶ್ರುತಿ.ಪಿ.ಆರ್ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button