ಆಗ್ರಿ ಟಿಂಕರಿಂಗ್ ಫೆಸ್ಟ್ ಅನ್ವೇಷಣಾ-2019ರಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಬಹುಮಾನ….

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ 6 ಪ್ರಾಜೆಕ್ಟ್ ಗಳಿಗೆ ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಆಗ್ರಿ ಟಿಂಕರಿಂಗ್ ಫೆಸ್ಟ್ ಅನ್ವೇಷಣಾ-2019ರಲ್ಲಿ ಶ್ರೇಷ್ಠತಾ ಪ್ರಶಸ್ತಿಯೊಂದಿಗೆ ತಲಾ 5000 ರೂಗಳ ನಗದು ಬಹುಮಾನ ದೊರಕಿದೆ. ಅಲ್ಲದೆ 5 ಪ್ರಾಜೆಕ್ಟ್ ಗಳು ಕರ್ನಾಟಕ ಲಘು ಉದ್ಯೋಗ ಭಾರತಿ ಸಂಸ್ಥೆಯಿಂದ ಮುಂದಿನ ಅಭಿವೃಧಿಗಾಗಿ ಆಯ್ಕೆಗೊಂಡಿವೆ.
ಒಟ್ಟು ನಾಲ್ಕು ವಿಭಾಗದಲ್ಲಿ ಈ ಸ್ಪರ್ಧೆಯು ನಡೆದಿದ್ದು ಮಣ್ಣು ಮತ್ತು ನೀರು ನಿರ್ವಹಣಾ ವಿಭಾಗ ಸ್ಪರ್ಧೆಯಲ್ಲಿ ವಿಖ್ಯಾತ್.ಜೆ.ಯು ಹಾಗೂ ಸುದರ್ಶನ್ ಶೆಟ್ಟಿ ಅವರು ಅಭಿವೃದ್ಧಿಪಡಿಸಿದ ಬಾಳೆಗಿಡದ ಕಾಂಡದಿಂದ ಸಮುದ್ರದ ನೀರಿನ ಉಪ್ಪಿನಂಶವನ್ನು ತೆಗೆಯುವ ವಿಧಾನ ಮತ್ತು ಶಬರೀಶ್.ಎಸ್ ಹಾಗೂ ದೇವಿಪ್ರಸಾದ್ ಅವರು ನಿರ್ಮಿಸಿದ ಸ್ವಯಂಚಾಲಿತ ನೀರಾವರಿ ವಿಧಾನವು ಪ್ರಥಮ ಪ್ರಶಸ್ತಿಯ ಜತೆಗೆ ನಗದು ಬಹುಮಾನ ಪಡೆದುಕೊಂಡಿದೆ.
ಎಮರ್ಜಿಂಗ್ ಟೆಕ್ನಾಲಜಿ ಇನ್ ಎಗ್ರಿಕಲ್ಚರ್ ವಿಭಾಗದಲ್ಲಿ ಶಬರೀಶ್.ಎಂ ಹಾಗೂ ಸಾತ್ವಿಕ್ ವಾಗ್ಲೆ.ಕೆ.ವೈ ಅವರ ಆರ್ಡಿನೋ ಬಳಸಿ ಸ್ವಯಂಚಾಲಿತ ನೀರಾವರಿ ವಿಧಾನ, ಅನಘ್ರ್ಯ ಹಾಗೂ ವಿಶ್ರಾಂತ್.ಎ ಅವರು ಅಭಿವೃದ್ಧಿಪಡಿಸಿದ ಅಡಿಕೆ ಒಣಗಿಸುವ ವಿಧಾನ ಮತ್ತು ಪ್ರಜ್ವಲ್.ಕೆ ಹಾಗೂ ಅಖಿಲೇಶ್.ಎಂ ಅವರ ವಿವಿದೋದ್ದೇಶ ಬೆಳೆರಕ್ಷಕ ರೋಬೋಟ್ ತಂತ್ರಜ್ಞಾನಗಳು ಪ್ರಥಮ ಬಹುಮಾನದೊಂದಿಗೆ ನಗದು ಪುರಸ್ಕಾರವನ್ನು ಪಡೆದುಕೊಂಡಿವೆ.
ಅಡಿಕೆ ಉತ್ಪನ್ನಗಳ ನೂತನ ಆವಿಷ್ಕಾರ ವಿಭಾಗದಲ್ಲಿ ವಿದ್ಯಾರತ್ನ ಹಾಗೂ ಸ್ಪರ್ಶ ಶೆಟ್ಟಿ.ಜಿ ಅವರ ಔಷಧಕ್ಕಾಗಿ ಅಡಿಕೆಯ ಬಳಕೆ ಎನ್ನುವ ಯೋಜನೆಗೆ ಪ್ರಥಮ ಬಹುಮಾನ ಹಾಗೂ ನಗದು ಪುರಸ್ಕಾರ ದೊರಕಿದೆ.
ಇದಲ್ಲದೆ ಕರ್ನಾಟಕ ಲಘು ಉದ್ಯೋಗ ಭಾರತಿ ಸಂಸ್ಥೆಯು 5 ಪ್ರಾಜೆಕ್ಟುಗಳನ್ನು ಮುಂದಿನ ಅಭಿವೃದ್ಧಿಗಾಗಿ ಆಯ್ಕೆ ಮಾಡಿದೆ. ಅಖಿಲ್.ಕೆ ಹಾಗೂ ರವಿಶಂಕರ.ಪಿ ಅವರ ಅಡಿಕೆ ಮರದ ಸಿಂಪಡಣೆ ತಂತ್ರಜ್ಞಾನ, ಅನಘ್ರ್ಯ ಹಾಗೂ ವಿಶ್ರಾಂತ್.ಎ ಅವರ ಅಡಿಕೆ ಒಣಗಿಸುವ ವಿಧಾನ, ದೇವದತ್ತ ಭಟ್ ಹಾಗೂ ಧನುಶ್ ಘಾಟೆ ಅವರ ಕೀಟ ನಿಯಂತ್ರಣಾ ವಿಧಾನ, ಅಮೃತಾ.ವಿ ಹಾಗೂ ಅನನ್ಯ.ಎ.ಎಸ್ ಅವರ ಭಾರ ಸಾಗಿಸುವ ಟ್ರಾಲಿ ಮತ್ತು ಪ್ರಜ್ವಲ್.ಕೆ ಹಾಗೂ ಅಖಿಲೇಶ್.ಎಂ ಅವರ ವಿವಿದೋದ್ದೇಶ ಬೆಳೆ ರಕ್ಷಕ ರೋಬೋಟ್ ಮತ್ತು ಅಡಿಕೆ ರಕ್ಷಕ ವಿಧಾನವು ಇದಕ್ಕಾಗಿ ಆಯ್ಕೆಯಾಗಿದೆ.
ಕಾಲೇಜಿನ ಐಒಟಿ ಪ್ರಯೋಗಾಲಯದಲ್ಲಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಮಹೇಶ್.ಕೆ.ಕೆ ಅವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದರು ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button