ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಅಂತ‌ರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ – ‘ಯಕ್ಷೋತ್ಸವ-2024’

ಮಂಗಳೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಮೂರು ದಿನಗಳ ಕಾಲ ನಡೆಯುವ 32ನೇ ವರ್ಷದ ಅಂತ‌ರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ-2024’ ಕಾರ್ಯಕ್ರಮವು ದಿನಾಂಕ 23-02-2024 ರಂದು ಕಾಲೇಜಿನ ಆವರಣದಲ್ಲಿ ಆರಂಭಗೊಂಡಿತು.
ಯಕ್ಷೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ಹಿರಿಯ ವಕೀಲರಾದ ಶ್ರೀ ಮಹೇಶ್ ಕಜೆ “ಯಕ್ಷಗಾನ ಪರಿಪೂರ್ಣ ಕಲೆಯಾಗಿದೆ. ಯಕ್ಷಗಾನ ನಮ್ಮ ಮಣ್ಣಿನ ಶ್ರೀಮಂತ ಗಂಡು ಕಲೆಯಾಗಿದ್ದು, ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸಲು ‘ಯಕ್ಷೋತ್ಸವ’ದಂತಹ ವೇದಿಕೆ ಸೂಕ್ತವಾಗಿದೆ. ಎಸ್‌.ಡಿ.ಎಂ. ಕಾನೂನು ಕಾಲೇಜಿನಲ್ಲಿ ಹಲವಾರು ಜನರ ಪರಿಶ್ರಮದಿಂದ ಇಂದು ‘ಯಕ್ಷೋತ್ಸವ’ ಮುಂದುವರೆಯುತ್ತಿದೆ. ವಿದ್ಯಾರ್ಥಿಗಳ ತಂಡ ಮುಂದಿಟ್ಟ ಹೆಜ್ಜೆಗಳಿಂದಾಗಿ 32 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ” ಎಂದರು.
ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ದೇವರಾಜ್ ಕೆ. ಮಾತನಾಡಿ “ಕಳೆದ 32 ವರ್ಷಗಳಿಂದ ಆಡಳಿತ ಮಂಡಳಿಯ ಸಹಕಾರದಿಂದ ಉತ್ತಮ ಕಾರ್ಯ ನಡೆಯುತ್ತಿದೆ. ಕೆಲವು ಅನಿವಾರ್ಯ ಸಂದರ್ಭದಲ್ಲಿ ನಿಲ್ಲಿಸುವ ಹಂತಕ್ಕೆ ಬಂದಾಗ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಮುನ್ನಡೆಸಲು ಸಾಧ್ಯವಾಗಿದೆ” ಎಂದರು. ‘ಯಕ್ಷೋತ್ಸವ’ದ ಸಂಚಾಲಕರಾದ ಪ್ರೊ. ಪುಷ್ಪರಾಜ್ ಕೆ. ಮಾತನಾಡಿ “ಆರಂಭದ ದಿನಗಳಿಂದ ಇಲ್ಲಿಯ ತನಕ ವಿವಿಧ ರೀತಿಯಲ್ಲಿ ಹೊಸತನಕ್ಕೆ ‘ಯಕ್ಷೋತ್ಸವ’ ಸಾಕ್ಷಿಯಾಗಿದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ‘ಯಕ್ಷೋತ್ಸವ’ದ ಮಾಜಿ ಸಂಚಾಲಕ ನರೇಶ್ ಮಲ್ಲಿಗೆಮಾಡು ಹಾಗೂ ರಂಜಿತ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಪ್ರಾಂಶುಪಾಲ ಡಾ. ತಾರಾನಾಥ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್‌ ಶುಭ ಹಾರೈಸಿದರು.ಯಕ್ಷೋತ್ಸವ ಸಲಹಾ ಸಮಿತಿ ಸದಸ್ಯ, ಪೂರ್ವ ವಿದ್ಯಾರ್ಥಿ ಮತ್ತು ಯಕ್ಷೋತ್ಸವ ಆರಂಭಿಸಿದ ತಂಡದ ಕಲಾವಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಾ. ಚಂದ್ರಲೇಖ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಮಯಿ ನಿರೂಪಿಸಿ, ಯಕ್ಷೋತ್ಸವದ ಕಾರ್ಯನಿರ್ವಹಣಾ ಕಾರ್ಯದರ್ಶಿ ದಿಶಾ ವಂದಿಸಿದರು.
ದಿನಾಂಕ 23-02-2024 ಮತ್ತು ದಿನಾಂಕ 24-02-2024 ಒಟ್ಟು 12 ಕಾಲೇಜು ತಂಡಗಳು ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ದಿನಾಂಕ 25-02-2024ರಂದು ಮೊದಲನೇ ಸುತ್ತಿನಲ್ಲಿ ಆಯ್ಕೆಗೊಂಡ ಐದು ತಂಡಗಳಿಂದ ‘ಸುಧನ್ವ – ಅರ್ಜುನ ಕಾಳಗ’ ಪ್ರಸಂಗದ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಇದರ ‘ಯಕ್ಷತರಂಗ’ ಸದಸ್ಯರಿಂದ ‘ಓಂ ನಮಃ ಶಿವಾಯ’ ಎಂಬ ಪ್ರಸಂಗದ ಪ್ರದರ್ಶನ ಮತ್ತು ಸಂಜೆ ಗಂಟೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

whatsapp image 2024 02 24 at 6.16.09 pm (1)

whatsapp image 2024 02 24 at 6.16.07 pm

whatsapp image 2024 02 24 at 6.16.09 pm

Sponsors

Related Articles

Back to top button