ಕೆ ಎಸ್ ಆರ್ ಟಿ ಸಿ ಚಾಲಕ, ನಿರ್ವಾಹಕರು ಸಮಯ ಪಾಲನೆ ಮಾಡಿ-ಶಾಸಕ ಸಂಜೀವ ಮಠಂದೂರು….
ಪುತ್ತೂರು: ಸರಿಯಾಗಿ ಸಮಯ ಪಾಲನೆ ಇಲ್ಲದಿರುವುದೇ ಕೆ ಎಸ್ ಆರ್ ಟಿ ಸಿ ಗೆ ಸಮಸ್ಯೆಯಾಗಿದ್ದು, ಖಾಸಗಿ ಬಸ್ಸಿನವರು ಸಮಯ ಪಾಲನೆ ಸರಿಯಾಗಿ ಮಾಡುತ್ತಾರೆ. ಅದರಂತೆ ಕೆ ಎಸ್ ಆರ್ ಟಿ ಸಿ ಬಸ್ಸು ಚಾಲಕ, ನಿರ್ವಾಹಕರು ಸಮರ್ಪಕವಾಗಿ ಸಮಯ ಪಾಲನೆ ಮಾಡಬೇಕು. ಇದರಿಂದ ಪ್ರಯಾಣಿಕರಿಗೆ ಅಗುವ ತೊಂದರೆಯನ್ನು ತಪ್ಪಿಸಬಹುದು ಎಂದು ಶಾಸಕ ಸಂಜೀವ ಮಠಂದೂರು ಕಿವಿಮಾತು ಹೇಳಿದರು.
ಕೆ ಎಸ್ ಆರ್ ಟಿ ಸಿ ಜನ ಸಂಪರ್ಕ ಸಭೆ ಸೋಮವಾರ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ಸರಕಾರಿ ಬಸ್ಗಳು ಅಸಮರ್ಪಕ ಸೇವೆಯಿಂದಾಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿವೆ. ಒಂದು ರೂಟಿಗೆ ಬಸ್ ಹಾಕಿದ ಮೇಲೆ ಅದು ಸಮಯಕ್ಕೆ ಸರಿಯಾಗಿ ಓಡಾಟ ನಡೆಸಬೇಕು. ವರ್ಷಪೂರ್ತಿ ನಿತ್ಯವೂ ಬರಬೇಕು. ಇವೆರಡು ನಿಯತ್ತನ್ನು ಉಳಿಸಿಕೊಂಡರೆ ಜನರ ವಿಶ್ವಾಸ ಗಳಿಸಲು ಸಾಧ್ಯ ಮತ್ತು ಖಾಸಗಿ ವಾಹನಗಳ ಸ್ಪರ್ಧೆಯ ನಡುವೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಹೊಸ ಬಸ್ ಗಳ ವಿಚಾರದ ಬಗ್ಗೆ ಸಾರಿಗೆ ಸಚಿವರೊಂದಿಗೆ ಮಾತನಾಡುವುದಾಗಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪಾಧ್ಯಕ್ಷೆ ಲಲಿತಾ ಈಶ್ವರ್, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ಕೆ ಎಸ್ ಆರ್ ಟಿ ಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಡಿಪೋ ಮೆನೇಜರ್ ಸತ್ಯಲತಾ, ಕಾಮಗಾರಿ ಇಂಜಿನಿಯರ್ ಶರತ್ ಉಪಸ್ಥಿತರಿದ್ದರು. ಕೆ ಎಸ್ ಆರ್ ಟಿ ಸಿ ಸಂಚಾರ ಸಹಾಯಕ ವ್ಯವಸ್ಥಾಪಕ ಭಾಸ್ಕರ ಸ್ವಾಗತಿಸಿದರು.