ಸುದ್ದಿ

ಕೋಡಿಂಬಾಡಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ…

ಪುತ್ತೂರು: ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಮನೆಯಿಂದಲೇ ಆರಂಭಗೊಳ್ಳಬೇಕು. ಪ್ರತಿಯೊಬ್ಬರಲ್ಲೂ ಈ ಪ್ರಜ್ಞೆ ಮೂಡಿದರೆ ಮಾತ್ರ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛತೆಯಿಂದ ಕೂಡಿರಲು ಸಾಧ್ಯ. ಮುಂದಿನ ದಿನಗಳಲ್ಲಿ ಪ್ರತೀ ಶನಿವಾರದಂದು ಗ್ರಾಮ ಪಂಚಾಯತ್ ವತಿಯಿಂದ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುವುದು ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಹೇಳಿದರು.
ಅವರು ಕೋಡಿಂಬಾಡಿ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ನಡೆದ ಸ್ವಚ್ಛತಾ ಹೀ ಸೇವಾ ಕಾರ್ಯ-ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಸ್ವಚ್ಛತೆ ಎಂಬುದು ನಮ್ಮ ಮನೆ ಮನಗಳಲ್ಲಿ ಮೂಡಬೇಕು. ಸ್ವಚ್ಚತಾ ಅವ್ಯವಸ್ಥೆಗೆ ಪಂಚಾಯತ್ ಹಾಗೂ ಅಧಿಕಾರಿಗಳನ್ನು ಹೊಣೆಯನ್ನಾಗಿಸುವುದು ಸರಿಯಲ್ಲ. ಪ್ರಸ್ತುತ ಎಲ್ಲೆಡೆ ರಸ್ತೆ ಬದಿ, ಇನ್ನಿತರ ಕಡೆಗಳಲ್ಲಿ ಪ್ಲಾಸ್ಟಿಕ್, ಇನ್ನಿತರ ತ್ಯಾಜ್ಯಗಳು ರಾರಾಜಿಸುತ್ತಿದ್ದು, ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಆರೋಗ್ಯಯುತ ಉತ್ತಮ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಯವರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ತಾವೇ ವಿಲೇವಾರಿಗೊಳಿಸುವ ಹಾಗೂ ಕಸಗಳನ್ನು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ, ಹಸಿ ಕಸಗಳನ್ನು ಗೊಬ್ಬರವಾಗಿ ಬಳಸಿ ಮತ್ತು ಒಣ ಕಸವನ್ನು ಪಂಚಾಯತ್‍ಗಳಿಗೆ ಹಸ್ತಾಂತರಿಸುವ ಕೆಲಸ ಮಾಡಬೇಕು. ಎಂದರು.
ಪಂಚಾಯತ್ ವ್ಯಾಪ್ತಿಯ ಸೇಡಿಯಾಪು ಎಂಬಲ್ಲಿ ಆರಂಭಗೊಂಡ ಜಾಗೃತಿಜಾಥಾಕ್ಕೆ ತಾಲೂಕು ಪಂಚಾಯುತ್ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಅವರು ಚಾಲನೆ ನೀಡಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಮನೋಹರ ಡಿ.ವಿ., ರೇವತಿ ವೀರಪ್ಪ ಪೂಜಾರಿ, ರಾಮಚಂದ್ರ ಪೂಜಾರಿ, ಕಾರ್ಯದರ್ಶಿ ರಮೇಶ್, ಅಭಿವೃದ್ಧಿ ಅಧಿಕಾರಿ ಚಿತ್ರಾವತಿ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತ್ ಸದಸ್ಯ ಜಗನ್ನಾಥ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಜಾಥಾ ಸೇಡಿಯಾಪಿನಿಂದ ಶಾಂತಿನಗರ ತನಕ ನಡೆಯಿತು. ಅಲ್ಲಿ ಸಂಸಾರ ಕಲಾ ತಂಡದವರಿಂದ ಸ್ವಚ್ಛತೆಯ ಕುರಿತು ಬೀದಿ ನಾಟಕ ಪ್ರದರ್ಶನಗೊಂಡಿತು.ಕಾರ್ಯಕ್ರಮದಲ್ಲಿ ಬಟ್ಟೆ ಚೀಲಗಳನ್ನು ವಿತರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button