ಅಮೃತರು ಸಾಹಿತ್ಯ ಲೋಕದ ಮೇರು ಪರ್ವತ -ಸಾಹಿತಿ ಡಾ.ಪ್ರಭಾಕರ ನೀರುಮಾರ್ಗ…

ಮಂಗಳೂರು : ಕಾವ್ಯ,ಕಥೆ,ನಾಟಕ, ಯಕ್ಷಗಾನ ಸಹಿತ ಸಾರಸ್ವತ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ಅಮೃತ ಸೋಮೇಶ್ವರ ಅವರು ಸಾಹಿತ್ಯ ಲೋಕದ ಮೇರು ಪರ್ವತ. ಸದಾ ಹೊಸತನವನ್ನು ನಿರೂಪಿಸಿದ ಅಮೃತರು ರಾಷ್ಟ್ರ ಕವಿಯಾಗುವ ಎಲ್ಲ ಅರ್ಹತೆ ಹೊಂದಿದ್ದರು ಎಂದು ಸಾಹಿತಿ ಡಾ.ಪ್ರಭಾಕರ ನೀರುಮಾರ್ಗ ಹೇಳಿದರು.
ಅಗಲಿದ ಹಿರಿಯ ಜಾನಪದ ತಜ್ಞ ಅಮೃತ ಸೋಮೇಶ್ವರ ಅವರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ನಗರದ ಚಿಲಿಂಬಿಯ ಶಾರದಾ ನಿಕೇತನದಲ್ಲಿ ಏರ್ಪಡಿಸಲಾದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.
ಮಂಗಳೂರು ವಿ.ವಿ.ಯ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಚಾಲಕ ಡಾ.ಮಾಧವ ಎಂ.ಕೆ. ಮಾತನಾಡಿ ‘ ವಿನಯ ಮತ್ತು ವಿದ್ವತ್‌ನ ಸಮ್ಮಿಶ್ರಣವಾಗಿದ್ದ ಅಮೃತರು ಮಾನವೀಯತೆಯ ಹರಿಕಾರರಾಗಿದ್ದರು ಎಂದರು.
ಸಾಹಿತಿ ಮುದ್ದು ಮೂಡುಬೆಳ್ಳೆ, ಪತ್ರಕರ್ತ ಭಾಸ್ಕರ ರೈ ಕಟ್ಟ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸಾಮಾಜಿಕ ಕಾರ್ಯಕರ್ತ ಮಹೇಶ್ ನುಡಿ ನಮನ ಸಲ್ಲಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.
ಚಿಲಿಂಬಿ ಬಾಲಕರ ಶಾರದಾ ಮಹೋತ್ಸವ ಟ್ರಸ್ಟ್‌ನ ಅಧ್ಯಕ್ಷ ಸುಬ್ರಾಯ ನಾಯಕ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಖಜಾಂಜಿ ಪುಷ್ಪರಾಜ್ ಬಿ.ಎನ್., ಜಾನಪದ ಪರಿಷತ್‌ನ ಅಧ್ಯಕ್ಷ ಪ್ರವೀಣ್‌ಕುಮಾರ್
ಕೊಡಿಯಾಲ್‌ಬೈಲ್ , ಅಭಾಸಾಪ ರಾಜ್ಯ ಕಾರ್ಯದರ್ಶಿ ಶೈಲೇಶ್ ಕುಲಾಲ್, ರಂಗಕರ್ಮಿ ಎಂ.ಎಸ್.ರಾವ್ ಶರವು, ಟಿ.ವಿ.ಅಂಬು, ಭಾಸ್ಕರ ಸಾಲಿಯಾನ್, ಹರೀಶ್.ಎ., ಪುರುಷೋತ್ತಮ ಸಾಂತುವಾಲ್, ಪ್ರಶಾಂತ್ ಕಡಬ ಉಪಸ್ಥಿತರಿದ್ದರು.
ಅಭಾಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಿಮಳಾ ರಾವ್ ಸ್ವಾಗತಿಸಿ, ಗೀತಾ ಲಕ್ಷ್ಮೀಶ್ ವಂದಿಸಿದರು.

 

Sponsors

Related Articles

Back to top button