ಜ.4,5: ಪುತ್ತೂರಿನಲ್ಲಿ ಪ್ರಥಮ ಬಾರಿಗೆ `ಸಾವಯವ ಹಬ್ಬ’….
ಪುತ್ತೂರು: ಸಾವಯವ ಸಿರಿಧಾನ್ಯ, ದಿನಸಿ, ತರಕಾರಿ ಮತ್ತು ಅಡುಗೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುತ್ತೂರಿನ ನವಚೇತನ ಸ್ನೇಹ ಸಂಗಮ ಮತ್ತು ಜೆಸಿಐ ಆಯೋಜನೆಯಲ್ಲಿ ಪ್ರಥಮ ಬಾರಿಗೆ `ಸಾವಯವ ಹಬ್ಬ’ ವಿಶೇಷ ಕಾರ್ಯಕ್ರಮ ಜ.4 ಮತ್ತು 5ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾವಯವ ಹಬ್ಬವನ್ನು ಜ.4ರಂದು ಪೂವಾಹ್ನ ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟಿಸಲಿದ್ದಾರೆ. ಸಾವಯವ ಹಬ್ಬ ಕ್ರಿಯಾ ಸಮಿತಿಯ ಗೌರವ ಅಧ್ಯಕ್ಷ ರೆ. ವಿಜಯ ಹಾರ್ವಿನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ.ಶ್ರೀ. ಆನಂದ ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಕ್ಯಾಂಪ್ಕೋ ಸಂಸ್ಥೆ ಉಪಾಧ್ಯಕ್ಷ ಶಂ.ನಾ ಖಂಡಿಗೆ ಆಶಯ ನುಡಿಗಳನ್ನಾಡಲಿದ್ದಾರೆ. ಜೇಸಿ ಬಾದ್‍ಶಾ ಸಂಬಾರತೋಟ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾವಯವ ಭತ್ತದ ಕೃಷಿಕ ದಂಪತಿಗಳಾದ ಉಷಾ ಮೆಹಂದಳೆ ಮತ್ತು ಸೀತಾರಾಮ ಮೆಹಂದಳೆ ಅವರಿಗೆ ಗೌರವಾರ್ಪಣೆ ಮಾಡಲಾಗುವುದು. ಹಾಗೂ ನೂತನ `ನವತೇಜ ಟ್ರಸ್ಟ್’ಗೆ ಚಾಲನೆ ನೀಡಲಾಗುವುದು ಮತ್ತು ಲೇಖಕ ನಾ. ಕಾರಂತ ಪೆರಾಜೆ ಅವರ `ಜೀವಧಾನ್ಯ’ ಪುಸ್ತಕ ಲೋಕಾರ್ಪಣೆ ಮಾಡಲಾಗುವುದು.
ಅಪರಾಹ್ನ `ಸಾವಯವ ಬದುಕು-ಯಶದ ಹೆಜ್ಜೆ’ ವಿಚಾರ ಗೋಷ್ಠಿ ನಡೆಯಲಿದ್ದು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರ ಸಜ್ಜನ ಮತ್ತು ಮಡಿಕೇರಿಯ ಸಿವಿಲ್ ಇಂಜಿನಿಯರ್ ಶಿವಕುಮಾರ್ ವಿಷಯ ಮಂಡನೆ ಮಾಡಲಿದ್ದಾರೆ. ಸಾಂಪ್ರದಾಯಿಕ ಭತ್ತದ ಕೃಷಿಕ ರಘುಪತಿ ಎರ್ಕಡಿತ್ತಾಯ ಉಪಸ್ಥಿತರಿರುತ್ತಾರೆ.
ಜ.5ರಂದು ಪೂರ್ವಾಹ್ನ `ಸಾವಯವ ವೈವಿದ್ಯ’ ಗೋಷ್ಠಿಯು ಫಾರ್ಮರ್ ಫಸ್ಟ್ ಟ್ರಸ್ಟ್ ನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬೆಂಗಳೂರಿನ ಊಟ ಫ್ರಮ್ ಯುವರ್ ತೋಟ ಇದರ ಸಂಚಾಲಕ ರಾಜೇಂದ್ರ ಹೆಗಡೆ ಮತ್ತು ತರಕಾರಿ ಕೃಷಿ ತಜ್ಞ ಶಿವಪ್ರಸಾದ್ ವರ್ಮುಡಿ ವಿಷಯ ಮಂಡನೆ ಮಾಡಲಿದ್ದಾರೆ. ಅಗ್ರೋ ಮ್ಯಾಕ್ ಕೋಡಿಬೈಲು ಇದರ ಕೆ. ಸತ್ಯನಾರಾಯಣ ಉಪಸ್ಥಿತರಿರುವರು.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ವಹಿಸಲಿದ್ದಾರೆ. ಜೆಸಿಐ ಪುತ್ತೂರು ಕಾರ್ಯದರ್ಶಿ ಪ್ರಮೀತಾ ಸಿ. ಹಾಸ್ ಸಮಾರೋಪ ಭಾಷಣ ಮಾಡಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪತ್ರಕರ್ತ ಶ್ಯಾಮ ಸುದರ್ಶನ, ಜೆಎಂಎಫ್ ಅಶ್ವಿನಿ ಐತಾಳ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಾವಯವ ಕೃಷಿ ದಂಪತಿಗಳಾದ ತುಳಸಿ ಮತ್ತು ಸುಬ್ರಾಯ ಬಿ.ಎಸ್ ಅವರಿಗೆ ಗೌರವಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು. ಸಾವಯವ ಹಬ್ಬದ ಹಿನ್ನಲೆಯಲ್ಲಿ ದ. 4 ಸಿರಿಧಾನ್ಯ ಸಂತೆ ಹಾಗೂ ದ.5ರಂದು ತರಕಾರಿ ಸಂತೆ ವ್ಯವಸ್ಥೆಗೊಳಿಸಲಾಗಿದ್ದು, ಸುಮಾರು 50ಕ್ಕೂ ಅಧಿಕ ಸಾವಯವ ರೈತರು ಸಂತೆಯಲ್ಲಿ ಭಾವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾವಯವ ಹಬ್ಬ ಕ್ರಿಯಾ ಸಮಿತಿ ಗೌರವ ಅಧ್ಯಕ್ಷ ರೆ. ವಿಜಯ ಹಾರ್ವಿನ್, ಜೆಸಿಐ ಪುತ್ತೂರು ಅಧ್ಯಕ್ಷ ವೇಣುಗೋಪಾಲ್ ಎಸ್.ಜೆ, ಕಾರ್ಯದರ್ಶಿ ಪ್ರಮಿತಾ ಸಿ. ಹಾಸ್, ನವಚೇತನ ಸ್ನೇಹ ಸಂಗಮದ ಪ್ರಧಾನ ಕಾರ್ಯದರ್ಶಿ ಸುಹಾಸ್ ಮರಿಕೆ ಉಪಸ್ಥಿತರಿದ್ದರು.