ಭಾಸ್ಕರ ಬಾರ್ಯ ಪುತ್ತೂರಿನ ಸಾಂಸ್ಕೃತಿಕ, ಸಾಮಾಜಿಕ ರಾಯಭಾರಿ-ಸವಣೂರು ಸೀತಾರಾಮ ರೈ….

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತನ್ನ ಕಾರ್ಯಸೇವಾ ಚಟುವಟಿಕೆಯನ್ನು ಕೇವಲ ಯಕ್ಷಗಾನಕ್ಕೆ ಸೀಮಿತಗೊಳಿಸದೆ ಪುತ್ತೂರಿನಲ್ಲಿ ನಡೆಯುವ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಕೆಲಸಗಳಲ್ಲಿ ಕಳೆದ 30 ವರ್ಷಗಳಿಂದ ತನ್ನನ್ನು ತಾನು ಸಮರ್ಪಿಸಿಕೊಂಡವರಾಗಿದ್ದು, ಅವರು ಪುತ್ತೂರಿನ ಸಾಂಸ್ಕೃತಿಕ – ಸಾಮಾಜಿಕ ರಾಯಭಾರಿಯಾಗಿದ್ದಾರೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಹೇಳಿದರು.
ಅವರು ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅವರಿಗೆ 60 ಸಂವತ್ಸರಗಳು ತುಂಬಿದ ಹಿನ್ನೆಲೆಯಲ್ಲಿ ಬಾರ್ಯರ ಅಭಿಮಾನಿಗಳು ಆಯೋಜಿಸಿದ `ಬಾರ್ಯಾಭಿನಂದನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಮಾತನಾಡಿ ಭಾಸ್ಕರ ಬಾರ್ಯ ಅವರು ಕಲಾ ಪರಿಚಾರಕರು. ಯಕ್ಷಗಾನದ ಮೂಲಕ ಕನ್ನಡ ನುಡಿ, ಸಾಹಿತ್ಯ, ಸಂಸ್ಕೃತಿಗಳ ಪ್ರಸಾರದಲ್ಲಿ ಕೆಲಸ ಮಾಡಿದವರು. ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಬಾಸ್ಕರ ಬಾರ್ಯ ಅವರ ಕಳೆದ 30 ವರ್ಷಗಳ ಕಾರ್ಯ ಸಾಧನೆ ಬಹಳಷ್ಟು ಮಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರೇರಣೆ ನೀಡಿದೆ. ಭಾಸ್ಕರ ಬಾರ್ಯರ ಬದುಕಿನ ಆದರ್ಶ ಮತ್ತು ಜೀವನ ಉಲ್ಲಾಸ ಯುವಕರಿಗೆ ಪ್ರೇರಣೆ ನೀಡಿದೆ.
ಮಂಚಿಯ ಕೆಯ್ಯೂರು ನಾರಾಯಣ ಭಟ್, ಭಾಸ್ಕರ ಬಾರ್ಯ ಅವರು ವಿಶಿಷ್ಠ ವ್ಯಕ್ತಿತ್ವದೊಂದಿಗೆ ಸಾಮಾಜಿಕ ಕೆಲಸಗಳನ್ನು ನಿರ್ವಹಿಸುವ ಚಾಕಚಕ್ಯತೆಯ ಸಂಘಟಕರಾಗಿದ್ದಾರೆ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಮಾಜದ ಒಳಿತಿಗಾಗಿ ಕೆಲಸ ಮಾಡಿದ್ದಾರೆ. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ ಇವರು ನಿಸ್ವಾರ್ಥ ವ್ಯಕ್ತಿತ್ವದ ಮೂಲಕ ಸಾಧನೆ ಮಾಡಿದ್ದಾರೆ. ಇವರ ಕಲಾ ಜೀವನ ಆದರ್ಶಪ್ರಾಯವಾಗಿದೆ. ಯಕ್ಷಗಾನ ತಾಳಮದ್ದಳೆ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಕೊಡುಗೆ ಅಪಾರವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲಾ ಪೋಷಕ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಭಾಸ್ಕರ ಬಾರ್ಯರ ಸಮಾಜಮುಖಿ ಚಿಂತನೆ ಪುತ್ತೂರಿನ ಸಾರ್ವಜನಿಕ ಕ್ಷೇತ್ರದಲ್ಲಿ ಅನುಕರಣೀಯವಾಗಿದೆ. ದಣಿವರಿಯದ ಕೆಲಸಗಳ ಮೂಲಕ ಸಾಧನೆ ಮಾಡಿದ್ದಾರೆ. ಇವರ ಮುಂದಿನ ಬದುಕು ಇನ್ನಷ್ಟು ಕ್ರಿಯಾಶೀಲವಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಭಾಸ್ಕರ ಬಾರ್ಯರ ಧರ್ಮಪತ್ನಿ ಸ್ವರ್ಣಲತಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಗೌರವಾಧ್ಯಕ್ಷ ರಮಾನಂದ ನಾಯಕ್ ಬೊಳುವಾರು ಕಾರ್ಯಕ್ರಮ ಉದ್ಘಾಟಿಸಿದರು.
ಪತ್ರಕರ್ತ, ಅಂಕಣಕಾರ ನಾ. ಕಾರಂತ ಪೆರಾಜೆ ಸ್ವಾಗತಿಸಿದರು. ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜ್‍ನ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ಶಿಕ್ಷಕ ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಧರ್ಮಾಂಗದ ದಿಗ್ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಸುಬ್ರಾಯ ಸಂಪಾಜೆ, ಮದ್ದಳೆ ವಾದಕರಾಗಿ ಅಕ್ಷಯರಾವ್ ವಿಟ್ಲ, ಚೆಂಡೆ ವಾದಕರಾಗಿ ಮುರಳೀಧರ ಕಲ್ಲೂರಾಯ, ಅರ್ಥದಾರಿಗಳಾಗಿ ಶ್ರೀಧರ್ ಡಿ.ಎಸ್., ಗಣರಾಜ ಕುಂಬ್ಳೆ, ಗುಡ್ಡಪ್ಪ ಬಲ್ಯ, ಸುಬ್ಬಪ್ಪ ಕೈಕಂಬ, ರಾಮಚಂದ್ರ ಭಟ್ ದೇವರಗುಂಡಿ ಪಾಲ್ಗೊಂಡಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button