ಸುದ್ದಿ

ನೆಟ್ಟಣಿಗೆ ಮುಡ್ನೂರು ಗ್ರಾಪಂ ಕೆ.ಡಿ.ಪಿ ಸಭೆ….

ಪುತ್ತೂರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಅಪಾಯಕಾರಿ ಮರಗಳಿದ್ದು, ಈ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿ ಸಂಭಾವ್ಯ ಅಪಾಯಗಳನ್ನು ತಪ್ಪಿಸಬೇಕು ಎಂದು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಕೆಡಿಪಿ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್‍ನ ಪ್ರಥಮ ಕೆಡಿಪಿ ಸಭೆ ಇತ್ತೀಚೆಗೆ ಅಧ್ಯಕ್ಷೆ ಶಂಕರಿ.ಆರ್.ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ತಲೆಬೈಲು ಸಮೀಪ, ಪಂಚೋಡಿಯಲ್ಲಿ ಹಾಗೂ ಈಶ್ವರಮಂಗಲದ ಪಶು ಸಂಗೋಪಣಾ ಇಲಾಖೆ ಕಚೇರಿ ಮುಂಬಾಗದಲ್ಲಿರುವ ಮರಗಳು ಅಪಾಯಕಾರಿಯಾಗಿದ್ದು ಈ ಮರಗಳನ್ನು ತೆರವುಗೊಳಿಸುವಂತೆ ಸದಸ್ಯರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ರಕ್ಷಕ ಉಮೇಶ್ ಅವರು ಅಪಾಯಕಾರಿ ಮರಗಳ ಬಗ್ಗೆ ನಮಗೆ ಅರಿವಿದೆ, ಆದರೆ ಅದನ್ನು ಕಡಿದು ತೆರವುಗೊಳಿಸಲು ನಮ್ಮ ಇಲಾಖೆಯಲ್ಲಿ ಹಣದ ವ್ಯವಸ್ಥೆ ಇಲ್ಲ ಎಂದರು. ಉಪಾಧ್ಯಕ್ಷ ಶ್ರೀರಾಂ ಪಕ್ಕಳ ಕರ್ನೂರು ಅವರು ಮಾತನಾಡಿ ಅಪಾಯಕಾರಿ ಮರಗಳ ಬಗ್ಗೆ ಮೆಸ್ಕಾಂ ಇಲಾಖೆಗೆ ಬರೆದು ತೆರವುಗೊಳಿಸಲು ವ್ಯವಸ್ಥೆ ಮಾಡುವ ಎಂದರು.
ಸದಸ್ಯ ಶಂಸುದ್ದೀನ್ ಪಿ.ಕೆ ಮಾತನಾಡಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಲೇಬೇಕು, ಹಣ ಇಲ್ಲ ಎಂದು ಸುಮ್ಮನಾದರೆ ನಾಳೆ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಇಲಾಖೆಗಳಿಗೆ ಆಗದಿದ್ದರೆ, ಹಣ ಇಲ್ಲದಿದ್ದರೆ ಇಲಾಖೆಯ ಹೆಸರಿನಲ್ಲಿ ಮರಕಡಿಯಲು ಬೇಕಾದ ಹಣ ಸಂಗ್ರಹ ಮಾಡಲು ಅವಕಾಶ ಮಾಡಿಕೊಡಿ, ನಾವು ಪೇಟೆಯಲ್ಲಿ ಭಿಕ್ಷೆ ಎತ್ತಿಯಾದರೂ ಹಣ ಸಂಗ್ರಹಿಸಿ ಮರವನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದರು.
ಕೆಡಿಪಿ ಸಭೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಬರಬೇಕು ಎಂದು ಸದಸ್ಯ ಇಬ್ರಾಹಿಂ ಪಳ್ಳತ್ತೂರು ಅವರು ಆಗ್ರಹಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು. ಜಿಲ್ಲಾ ಪಂಚಾಯತ್ ಇಂಜಿನಿಯರ್ ಸಭೆಗೆ ಗೈರುಹಾಜರಾದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಇಂಜಿನಿಯರ್ ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಮೇಲಧಿಕಾರಿಗಳಿಗೆ ಬರೆದುಕೊಳ್ಳುವುದೆಂದು ತೀರ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಎಚ್.ಟಿ, ಕಾರ್ಯದರ್ಶಿ ಕಮಲ್‍ರಾಜ್ ಉಪಸ್ಥಿತರಿದ್ದರು. ಸದಸ್ಯರಾದ ರಮೇಶ್ ರೈ ಸಾಂತ್ಯ, ಖಾದರ್ ಕರ್ನೂರು, ಮಹಮ್ಮದ್ ಕುಂಞ ಕೆ.ಎಂ, ಅಬ್ದುಲ್ಲ ಕೆ, ಇಬ್ರಾಹಿಂ ಎಂ.ಬಿ, ಲಲಿತಾ, ಪುಷ್ಪಾವತಿ, ವಿಜಯಾ, ಉಷಾ, ಇಂದಿರಾ, ನಾರಾಯಣ ರೈ, ಮಾಧವಿ, ಲೀಲಾವತಿ ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.

Related Articles

Leave a Reply

Your email address will not be published.

Back to top button