Jannah Theme License is not validated, Go to the theme options page to validate the license, You need a single license for each domain name.
ಸುದ್ದಿ

ಮಾರಕಾಸ್ತ್ರದಿಂದ ಹಲ್ಲೆ-ಒಂದೇ ಕುಟುಂಬದ ಇಬ್ಬರು ಬಲಿ-ಓರ್ವ ಮಹಿಳೆ ಸ್ಥಿತಿ ಗಂಭೀರ…. .


ಪುತ್ತೂರು: ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟು ಓರ್ವ ಮಹಿಳೆ ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಅಜಲಾಡಿ ಹೊಸಮಾರು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದ್ದು, ಮಂಗಳವಾರ ಘಟನೆ ಬೆಳಕಿಗೆ ಬಂದಿದೆ.
ಹೊಸಮಾರು ನಿವಾಸಿ ಕೊಗ್ಗು ಸಾಹೇಬ್(62) ಮತ್ತು ಅವರ ಮೊಮ್ಮಗಳು ಸಮೀಹ ಬಾನು(16) ಕೊಲೆಗೀಡಾದವರು. ಕೊಗ್ಗು ಸಾಹೇಬ್ ಅವರ ಪತ್ನಿ ಖತೀಜಮ್ಮ(55) ಗಂಭೀರ ಗಾಯಗೊಂಡಿದ್ದು, ಪ್ರಜ್ಞಾಹೀನರಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಘಟನೆ ನಡೆದ ವೇಳೆಯಲ್ಲಿ ಮನೆಯಲ್ಲಿ ಈ ಮೂವರು ಮಾತ್ರವಿದ್ದ ಕಾರಣ ಹಂತಕರ ಕುರಿತು ಸುಳಿವು ಲಭ್ಯವಾಗಿಲ್ಲ.
ಕೊಗ್ಗು ಸಾಹೇಬ್ ದಂಪತಿಗೆ 3 ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಐವರು ಮಕ್ಕಳಿದ್ದು, ಎಲ್ಲರಿಗೂ ವಿವಾಹವಾಗಿದೆ. ಗಂಡು ಮಕ್ಕಳಲ್ಲಿ ಇಬ್ಬರು ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಕೊನೆಯ ಪುತ್ರ ತನ್ನ ಪತ್ನಿಯೊಂದಿಗೆ ತಂದೆ ತಾಯಿಯ ಜೊತೆಗಿದ್ದು, ಅವರು ವಿದೇಶದಲ್ಲಿದ್ದಾರೆ. ಕೊಲೆಯಾದ ಸಮೀಹ ಬಾನು ಅವರು ಕೊಗ್ಗು ಸಾಹೇಬರ ಹಿರಿಯ ಪುತ್ರಿಯಾದ ರಶೀದಾ ಬಾನು ಎಂಬವರ ಪುತ್ರಿ. ಸಮೀಹಾ ವಿಟ್ಲದಲ್ಲಿರುವ ತನ್ನ ಚಿಕ್ಕಮ್ಮನ ಮನೆಯಿಂದ ಪುತ್ತೂರಿನ ಮುರದಲ್ಲಿರುವ ಖಾಸಗಿ ಶಾಲೆಗೆ ಬರುತ್ತಿದ್ದ ಇವರು 9ನೇ ತರಗತಿಯ ವಿದ್ಯಾರ್ಥಿನಿ. ಕೊಗ್ಗು ಸಾಹೇಬ್ ಅವರ ಸೊಸೆ ಸೋಮವಾರ ತವರು ಮನೆಗೆ ಹೋಗಿದ್ದರು. ಮನೆಯಲ್ಲಿ ಹಿರಿಯರು ಇಬ್ಬರೇ ಇರುವ ಕಾರಣ ಅಜ್ಜಿ ಮನೆಗೆ ಬಂದಿದ್ದ ಸಮೀಹಾ ಅಲ್ಲಿಂದಲೇ ಶಾಲೆಗೆ ಹೋಗುತ್ತಿದ್ದರು ಎನ್ನಲಾಗಿದೆ.
ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಕಡಿದಿದ್ದು, ಇದರಿಂದಾಗಿ ಕೊಗ್ಗು ಸಾಹೇಬ್ ಮತ್ತು ಸಮೀಹ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳು ಖತೀಜಮ್ಮ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.
ಪೊಲೀಸ್ ತನಿಖೆ ವೇಳೆಯಲ್ಲಿ ಶ್ವಾನವು ಮನೆಯಿಂದ ಸುಮಾರು 300 ಮೀಟರ್ ನಷ್ಟು ದೂರ ತೆರಳಿ, ಬಳಿಕ ಸಮೀಪದಲ್ಲಿನ ನಳ್ಳಿಯ ಬಳಿಗೆ ಸಾಗಿತ್ತು. ಇದರಿಂದ ಹಂತಕರು ನಳ್ಳಿಯಲ್ಲಿ ಕೈ ತೊಳೆದು ಮುಂದುವರಿದಿರುವ ಶಂಕೆ ಕಂಡು ಬಂದಿದೆ.

ಸೋಮವಾರ ರಾತ್ರಿ ಕೊಗ್ಗು ಸಾಹೇಬ್ ಅವರ ಹಿರಿಯ ಪುತ್ರ ರಝಾಕ್ ಅವರು ತನ್ನ ತಾಯಿಗೆ ದೂರವಾಣಿ ಕರೆ ಮಾಡಿದ್ದು, ಆಗ ತಾಯಿಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮಂಗಳವಾರ ಬೆಳಗ್ಗೆ ರಝಾಕ್ ತನ್ನ ಮನೆಯಿಂದ ತಾಯಿಯ ಮನೆಗೆ ಆಗಮಿಸಿ ನೋಡಿದಾಗ ಮನೆಯ ಮುಂಭಾಗಿಲು ಒಳಭಾಗದಿಂದ ಚಿಲಕ ಹಾಕಿತ್ತು. ಮನೆಯ ಹಿಂಬಾಗಿಲು ತೆರೆದಿತ್ತು ಅದರ ಮೂಲಕ ಒಳಗೆ ಬಂದಾಗ ಕೊಗ್ಗು ಸಾಹೇಬ್ ಮತ್ತು ಸಮೀಹಾ ಬಾನು ಹೆಣವಾಗಿ ಬಿದ್ದಿದ್ದು, ಖತೀಜಮ್ಮ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಇದನ್ನು ಕಂಡು ರಝಾಕ್ ಬೊಬ್ಬೆ ಹೊಡೆದಿದ್ದು, ಬೊಬ್ಬೆ ಕೇಳಿ ಊರವರು ಮನೆಗೆ ಧಾವಿಸಿದ್ದರು. ಸ್ಥಳೀಯರ ಸಹಕಾರದಲ್ಲಿ ತಕ್ಷಣವೇ ಖತೀಜಮ್ಮ ಅವರನ್ನು ಅಟೋರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.
ಮೃತಪಟ್ಟವರ ಮೈಮೇಲೆ ಮಾರಕಾಯುಧಗಳಿಂದ ಕಡಿದ ಆಳವಾದ ಗಾಯಗಳಿದ್ದು, ಮೃತರ ತಲೆ, ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಕಡಿದ ಗಾಯಗಳಿವೆ. ಇಬ್ಬರ ಮೃತದೇಹಗಳು ಮುಂಭಾಗದ ಬಾಗಿಲ ಬಳಿಯ ನೆಲದಲ್ಲಿ ಬಿದ್ದುಕೊಂಡಿದ್ದು, ತಲೆದಿಂಬು ಹಾಗೂ ಬೆಡ್‍ಶೀಟ್‍ಗಳೂ ಅಲ್ಲಿ ಹರಡಿಕೊಂಡಿರುವ ಕಾರಣ ಮೂವರೂ ಅಲ್ಲೇ ಒಟ್ಟಾಗಿ ಮಲಗಿರುವ ಸಾಧ್ಯತೆಗಳು ಕಂಡು ಬರುತ್ತಿದೆ. ಅಲ್ಲದೆ ಮನೆಯ ವಿದ್ಯುತ್ ಫ್ಯೂಸ್ ತೆಗೆದಿರಿಸುವುದು ಕಂಡು ಬಂದಿದೆ. ಮನೆಯಲ್ಲಿರುವ ಯಾವುದೇ ವಸ್ತುಗಳಿಗೆ ಹುಡುಕಾಟ ನಡೆಸಿದ ಬಗ್ಗೆ ಕುರುಹು ಇಲ್ಲ ಚಿನ್ನದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಮನೆಯ ಬಾಗಿಲು ಒಡೆದ ಕುರುಹು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ
ಕೊಲೆ ನಡೆದದ್ದು ಯಾವಾಗ ಎಂಬ ಮಾಹಿತಿ ಅಸ್ಪಷ್ಟವಾಗಿದೆ. ಪೊಲೀಸರ ಪ್ರಕಾರ ಭಾನುವಾರ ರಾತ್ರಿಯಿಂದ ಸೋಮವಾರ ತಡ ರಾತ್ರಿಯೊಳಗೆ ನಡೆದಿರುವ ಸಾಧ್ಯತೆ ಇದೆ ಎಂದರೂ ಸೋಮವಾರ ಬೆಳಗ್ಗೆ ಕೊಲೆಯಾದ ಸಮೀಹಾ ಮನೆಯ ಜಗಲಿಯಲ್ಲಿ ಕುಳಿತಿರುವುದನ್ನು ನೋಡಿರುವುದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಬೀಹಾ ಸೋಮವಾರ ಶಾಲೆಗೆ ಹೋಗಿರುವುದಿಲ್ಲ ಎಂದು ತಿಳಿದು ಬಂದಿದೆ.
ಸೋಮವಾರದಿಂದ ತಾಯಿಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಹಿರಿಯ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಕ್ತ ಮಡುಗಟ್ಟಿದ್ದು, ಘಟನೆ ಯಾವಾಗ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಕೊಲೆ ಯಾವಾಗ ಮತ್ತು ಯಾಕಾಗಿ ನಡೆದಿದೆ ಎಂಬುದು ಪೊಲೀಸ್ ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ ಪಿ ಲಕ್ಷ್ಮೀಪ್ರಸಾದ್, ಎಡಿಷನಲ್ ಎಸ್ಪಿ ಡಾ. ವಿಕ್ರಂ ಆಮ್ಟೆ, ಎಎಸ್ಪಿ ಸೈದುಲ್ ಅದಾವತ್, ಡಿವೈಎಸ್‍ಪಿ ದಿನಕರ ಶೆಟ್ಟಿ, ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ನಾಗೇಶ್ ಕದ್ರಿ, ನಗರ ಠಾಣಾ ಇನ್ಸ್‍ಪೆಕ್ಟರ್ ತಿಮ್ಮಪ್ಪ ನಾಯ್ಕ, ಪುತ್ತೂರು ಗ್ರಾಮಾಂತರ ಎಸ್ ಐ ಸತ್ತಿವೇಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಕುರಿತು ಎಲ್ಲಾ ಆಯಾಮಗಳಲ್ಲಿಯೂ ಕೂಲಂಕುಷ ತನಿಖೆ ನಡೆಸಲಾಗುವುದು ಹಾಗೂ ಆರೋಪಿಗಳ ಪತ್ತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಈ ಘಟನೆ ಯಾಕಾಗಿ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಕೆಲವೊಂದು ಕುರುಹುಗಳು ಪತ್ತೆಯಾಗಿವೆ. ನಗ ನಗದು ಕಳವು ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button