Jannah Theme License is not validated, Go to the theme options page to validate the license, You need a single license for each domain name.
ಸುದ್ದಿ

ಪುತ್ತೂರು ನಗರಸಭೆಗೆ 24*7 ಕುಡಿಯುವ ನೀರು ಯೋಜನೆ ಪ್ರಾರಂಭೋತ್ಸವ…..

ಪುತ್ತೂರು: ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ನೆರೆ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದು, ಕೇಂದ್ರದ ಅನುದಾನಕ್ಕೆ ಕಾಯದ ಮುಖ್ಯ ಮಂತ್ರಿಗಳು ರೂ. 3 ಸಾವಿರ ಕೋಟಿ ಅನುದಾನವನ್ನು ತಕ್ಷಣವೇ ಬಿಡುಗಡೆಗೊಳಿಸಿದ್ದು, ಇದೀಗ ಕೇಂದ್ರ ಸರ್ಕಾರವು ರೂ.1200 ಕೋಟಿ ಮದ್ಯಂತರ ಅನುದಾನವನ್ನು ಬಿಡುಗಡೆಗೊಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಸೋಮವಾರ ಪುತ್ತೂರು ನಗರಸಭೆ ಹಾಗೂ ಕೆಯುಐಡಿಎಫ್‍ಸಿ ಇವುಗಳ ಜಂಟೀ ಆಶ್ರಯದಲ್ಲಿ ಎಡಿಬಿ ಯೋಜನೆಯಡಿ ರೂ.113 ಕೋಟಿ ವೆಚ್ಚದಲ್ಲಿ ಪುತ್ತೂರು ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಪ್ರಾರಂಭೊತ್ಸವದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ನಗರಾಡಳಿತಕ್ಕೆ ಆಡಳಿತ ಮಂಡಳಿ ನೇಮಕಕ್ಕೆ ಕೆಲವೊಂದು ಕಾನೂನು ಸಮಸ್ಯೆಗಳಿಂದಾಗಿ ವಿಳಂಭವಾಗಿದೆ. ಈ ಬಗ್ಗೆ ತಾನು ಈಗಾಗಲೇ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದೇನೆ. ನ್ಯಾಯಾಲದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ, ಅತಿ ಶೀಘ್ರದಲ್ಲಿ ನಗರಸಭಾ ಸದಸ್ಯರಿಗೆ ಅಧಿಕಾರದ ಹಕ್ಕು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳು ರಾಜ್ಯದ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಜನರ ಮೂಲಸೌಕರ್ಯ ಪೂರೈಕೆಯ ಕುರಿತು ನೆರೆ ಸಮಸ್ಯೆಯ ನಡುವೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ನಗರಗಳಲ್ಲಿ ಕುಡಿಯುವ ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ ಅಸಮರ್ಪಕವಾಗಿರುವುದಕ್ಕೆ ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು ಕಾರಣವಾಗಿದೆ. ನಗರ ಬೆಳವಣಿಗೆಯ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟತೆ ಇರಬೇಕು. ಅಧಿಕಾರಿಗಳು ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ ಬಗ್ಗೆ ವ್ಯವಸ್ಥೆಗಳಿಲ್ಲದೆ ಅನಿಯಮಿತವಾಗಿ ಫ್ಲಾಟ್ ನಿರ್ಮಾಣಕ್ಕೆ ಅವಕಾಶ ನೀಡುತ್ತಿದ್ದಾರೆ. ಇದರಿಂಗಾಗಿ ಸಮಸ್ಯೆ ಉಲ್ಬಣಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ ಪುತ್ತೂರು ನಗರದಲ್ಲಿ ಬಹುತೇಕ ಮಂದಿಗೆ ಈಗಾಗಲೇ 24 ಗಂಟೆಗಳ ನೀರು ಪೂರೈಕೆಯಾಗುತ್ತಿದೆ. ನೀರು ಸಿಗದ ಮಂದಿಗೆ ಈ ಯೋಜನೆ ಸಹಕಾರಿಯಾಗಲಿದೆ. ನಗರಸಭೆಯಲ್ಲಿ ಮುಂದಿನ 25 ವರ್ಷಗಳಿಗೆ ಪೂರಕವಾಗುವಂತೆ ಕುಡಿಯುವ ನೀರು ಯೋಜನೆಯನ್ನು ಸಿದ್ದಪಡಿಸಲಾಗಿದೆ. ನಗರದ ಜನತೆ 1 ಲಕ್ಷಕ್ಕೆ ಏರಿದರೂ ಯೋಜನೆಯಿಂದ ಕುಡಿಯುವ ನೀರಿಗೆ ಸಮಸ್ಯೆಗಳು ಆಗಲಾರದು ಎಂದರು.
ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ರೂ. 12 ಕೋಟಿ ಅನುದಾನ ಮಂಜೂರುಗೊಂಡಿದ್ದು, ಮುಂದಿನ 2 ವರ್ಷಗಳ ಒಳಗಾಗಿ ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಗರದಲ್ಲಿ ಅಂಡರ್‍ಗ್ರೌಂಡ್ ಡ್ರೈನೇಜ್ ನಿರ್ಮಾಣಕ್ಕಾಗಿ ಈ ಹಿಂದೆ ರೂ. 125 ಕೋಟಿಯ ಕ್ರಿಯಾಯೋಜನೆ ಸಿದ್ದಪಡಿಸಲಾಗಿದ್ದು, ಈ ಯೋಜನೆಗೆ ಪುನರ್‍ಜೀವ ಕೊಡಿಸುವ ಕೆಲಸ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪತ್ತೂರು ಉಪವಿಭಾಗಾಧಿಕಾರಿ ಹೆಚ್.ಕೆ. ಕೃಷ್ಣಮೂರ್ತಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಗುತ್ತಿಗೆದಾರ ಪ್ರಮೋದ್ ಉಪಸ್ಥಿತರಿದ್ದರು.
ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಸ್ವಾಗತಿಸಿದರು. ಕೆಯುಐಡಿಎಫ್‍ಸಿಯ ಸಹಾಯಕ ಅಭಿಯಂತರ ಮಾದೇಶ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button