ಪುತ್ತೂರು-ಮೆಸ್ಕಾಂ ಜನಸಂಪರ್ಕ ಸಭೆ….
ಪುತ್ತೂರು: ಮೆಸ್ಕಾಂ ಸಮರ್ಪಕವಾಗಿ ಪರಿಶೀಲನೆ ನಡೆಸದೆ ತಪ್ಪು ಬಿಲ್ಲುಗಳನ್ನು ನೀಡುತ್ತಿದ್ದು, ಗ್ರಾಹಕರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ. ಇದರಿಂದಾಗಿ ಗ್ರಾಹಕರು ಮಾತ್ರವಲ್ಲದೆ ವ್ಯಾಪಾರಿಗಳು, ವ್ಯವಹಾರಸ್ಥರು, ಗ್ರಾಮ ಪಂಚಾಯತ್ಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇಂತಹ ಅವ್ಯವಸ್ಥೆಯನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮೆಸ್ಕಾಂ ಗ್ರಾಹಕರು ಆಗ್ರಹಿಸಿದರು.
ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ(ಮೆಸ್ಕಾಂ) ವತಿಯಿಂದ ನಗರದ ಸಮುದಾಯ ಭವನದಲ್ಲಿ ಮಂಗಳವಾರ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಮೆಸ್ಕಾಂ ಗ್ರಾಹಕ, ನ್ಯಾಯವಾದಿ ಕೃಪಾಶಂಕರ್ ಮೆಸ್ಕಾಂ ಬಿಲ್ ನೀಡುವ ಸಂದರ್ಭದಲ್ಲಿ ಉಪೇಕ್ಷೆ ಮಾಡಲಾಗುತ್ತಿದೆ. ಇದರಿಂದಾಗಿ ತಪ್ಪು ಬಿಲ್ಲುಗಳ ಸೃಷ್ಟಿಯಾಗುತ್ತದೆ. ಅನೇಕ ಬಾರಿ ಇದು ಗ್ರಾಹಕರ ಗಮನಕ್ಕೆ ಬರುವುದಿಲ್ಲ. ಮಾತ್ರವಲ್ಲದೆ, ಸಣ್ಣ ಸಣ್ಣ ಮೊತ್ತಗಳನ್ನು ಬಿಲ್ಲಿನಲ್ಲಿ ನಮೂದಿಸಲಾಗಿದ್ದರೂ ಅದನ್ನು ಗ್ರಾಹಕರು ಗಮನಿಸುವುದೇ ವಿರಳ ಎಂದು ಸಭೆಯ ಗಮನಕ್ಕೆ ತಂದರು.
ಮಾಡಾವು ವಿದ್ಯುತ್ ಉಪಕೇಂದ್ರ ನಿರ್ಮಾಣ ಮಂದಗತಿಯಲ್ಲಿ ಸಾಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಮುಂದಕ್ಕೆ ಸಾಗುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ಹಾರಿಕೆಯ ಉತ್ತರಗಳನ್ನು ನೀಡುತ್ತಾರೆ. ಸಭೆಯಲ್ಲಿ ಸುಳ್ಳು ಮಾಹಿತಿಗಳನ್ನು ನೀಡುತ್ತಾರೆ. ಹಿರಿಯ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಹಾದಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ ಎಂದು ಕೃಪಾಶಂಕರ್ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.