ಪುತ್ತೂರು ಸರಕಾರಿ ಪ್ರಥಮದರ್ಜೆ ಮಹಿಳಾ ಪದವಿ ಕಾಲೇಜಿನಲ್ಲಿ ಎನ್.ಎಸ್.ಎಸ್. ದಿನಾಚರಣೆ….
ಪುತ್ತೂರು:ಸೇವಾ ಮನೋಭಾವವನ್ನು ಯುವಜನರಲ್ಲಿ ಬೆಳೆಸುವ ರಾಷ್ಟ್ರೀಯ ಸೇವಾ ಯೋಜನೆಯು ಕಳೆದ ಹಲವು ವರ್ಷಗಳಿಂದ ತಮ್ಮ ಲಕ್ಷಾಂತರ ಸ್ವಯಂಸೇವಕರ ಮೂಲಕ ವಿಶಿಷ್ಟವಾದ ಕೊಡುಗೆಯನ್ನು ಈ ಸಮಾಜಕ್ಕೆ ನೀಡಿದೆ. ಅದರಲ್ಲಿಯು ಇಂದಿನ ಅವಶ್ಯಕತೆಯಾಗಿರುವ ಸ್ವಚ್ಚತೆಯ ಬಗ್ಗೆ ಹಲವಾರು ವರ್ಷಗಳ ಹಿಂದೆಯೇ ಧ್ವನಿಯೆತ್ತಿರುವುದು ಮಾತ್ರವಲ್ಲದೇ, ಎನ್.ಎಸ್.ಎಸ್ ಶಿಬಿರಗಳ ಮೂಲಕ ಅದು ದೇಶಾದಾದ್ಯಂತ ಸ್ವಚ್ಚತೆಯನ್ನು ಕಾಪಾಡುತ್ತಿದೆ ಎಂದು ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಹೇಳಿದರು.
ಅವರು ಪುತ್ತೂರು ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಘಟಕಗಳ ವತಿಯಿಂದ ಬಪ್ಪಳಿಗೆಯ ಶ್ರೀನಾರಾಯಣ ಗುರು ಸಭಾಭವನದಲ್ಲಿ ನಡೆದ `ಎನ್.ಎಸ್.ಎಸ್. ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಸುದ್ದಿ ಮಾಹಿತಿ ಟ್ರಸ್ಟ್‍ನ ಉಮೇಶ್ ಮಿತ್ತಡ್ಕ ಮಾತನಾಡಿ, ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸುವುದರಿಂದ ಮಳೆಗಾಲದಲ್ಲಿ ಮಾತ್ರವಲ್ಲ ಬೇಸಗೆ ಕಾಲದಲ್ಲಿಯೂ ಮುನ್ಸೂಚನೆಯಿಲ್ಲದೆ ಸುರಿಯುವ ಮಳೆ ನೀರನ್ನು ಚರಂಡಿಗೆ ಹರಿದು ವ್ಯರ್ಥವಾಗುವುದನ್ನು ತಪ್ಪಿಸಬಹುದು. ಇದರಿಂದ ಬೇಸಗೆಯಲ್ಲಿ ತಲೆದೋರುವ ನೀರಿನ ಬವಣೆಗೂ ಪರಿಹಾರ ಕಂಡುಕೊಳ್ಳಬಹುದು ಎಂದರು. ಮಳೆಕೊಯ್ಲು ಅಳವಡಿಸಿದರೆ ಮಳೆಗಾಲದ ಜತೆಗೆ ಬೇಸಗೆಯಲ್ಲಿಯೂ ಛಾವಣಿಗೆ ಬಿದ್ದು ವ್ಯರ್ಥವಾಗುತ್ತಿರುವ ಮಳೆನೀರಿನ ಸದ್ಬಳಕೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ನಮ್ಮ ನಡುವೆಯೇ ಸಾಕಷ್ಟು ನೈಜ ನಿರ್ದಶನಗಳಿವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಝೇವಿಯರ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿ ಪ್ರೊ. ಗೋಪಾಲಕೃಷ್ಣ ಎನ್.ಎಸ್.ಎಸ್ ದಿನದ ಮಹತ್ವವನ್ನು ತಿಳಿಸಿದರು. ಕಾಲೇಜಿನ ಎನ್.ಎಸ್.ಎಸ್ ಘಟಕದ ಇನ್ನೂರ್ವ ಸಂಯೋಜನಾಧಿಕಾರಿ ಡಾ.ಸುಕೇಶ್, ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ ನಾಯಕಿಯಾದ ಕು.ಶರ್ವಿನ್ ಹಾಗೂ ಕು.ಚರಿತಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಹಿಳಾ ಪದವಿ ಕಾಲೇಜಿನ ವಾರ್ಷಿಕ ಸಂಚಿಕೆ `ಶಾಶ್ವತಿ’ಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಶಾಶ್ವತಿಯ ಸಂಪಾದಕ ಡಾ.ನರೇಂದ್ರ ರೈ ದೇರ್ಲ ನೇತೃತ್ವದಲ್ಲಿ ತಯಾರಿಸಲಾದ ಈ ವಾರ್ಷಿಕ ಸಂಚಿಕೆಯನ್ನು ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಕೆ. ರಾಧಾಕೃಷ್ಣ ಬೋರ್ಕರ್ ಬಿಡುಗಡೆಗೊಳಿಸಿದರು. ಕಾಲೇಜಿನ ಕಳೆದ ವರ್ಷದ ವಾರ್ಷಿಕ ಸಂಚಿಕೆ ಶಾಶ್ವತಿಗೆ ವಿ.ವಿ ಮಟ್ಟದ ಪ್ರಸಸ್ತಿಯು ದೊರಕಿತ್ತು.