ಸುದ್ದಿ

ಪೊಲೀಸ್ ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ….

ಪುತ್ತೂರು: ಮಹಿಳಾ ಪೊಲೀಸ್ ಠಾಣೆಗಳು ಸೇರಿದಂತೆ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ `ಆತಂಕದಲ್ಲಿರುವ ಮಹಿಳೆ ಮತ್ತು ಮಕ್ಕಳ ಆಪ್ತ ಸಮಾಲೋಚನೆಯ ಮೂಲ ಕೌಶಲ್ಯಗಳು’ ಎಂಬ ವಿಚಾರದ ಕುರಿತಾದ 2 ದಿನಗಳ ತರಬೇತಿ ಕಾರ್ಯಾಗಾರ ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಗುರುವಾರ ಆರಂಭಗೊಂಡಿತು.
ಜಿಲ್ಲಾ ಎಡಿಶನಲ್ ಎಸ್ಪಿ ಡಾ. ವಿಕ್ರಮ್ ಅಮ್ಟೆ ಅವರು ಕಾರ್ಯಾಗಾರ ಉದ್ಘಾಟಿಸಿದರು. ಬಂಟ್ವಾಳ ಎಎಸ್ಪಿ ಸೈದುಲ್ ಅದಾವತ್, ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ನಗರ ಠಾಣೆ ಇನ್‍ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಪುತ್ತೂರು ಮಹಿಳಾ ಠಾಣೆಯ ಇನ್‍ಸ್ಪೆಕ್ಟರ್ ಕುಸುಮಾಧರ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ನಡೆಯಿತು. ದೇಶದ ರಕ್ಷಣಾ ಸಂಶೋಧನಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಡಾ.ಜಯಪ್ರಕಾಶ್ ರಾವ್, ಮಂಗಳೂರಿನ ಶ್ವೇತಾ, ರಸೀನಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಪೊಲೀಸ್ ಠಾಣೆಗಳಿಗೆ ಬರುವ ಮಹಿಳೆ ಮತ್ತು ಮಕ್ಕಳ ಜತೆ ಯಾವ ರೀತಿ ವರ್ತಿಸಬೇಕು, ಅವರ ಸಮಸ್ಯೆಗಳನ್ನು ಆಲಿಸುವ ವಿಧಾನ ಹೇಗೆ, ಮಕ್ಕಳ ಸಮಸ್ಯೆ ಬಂದಾಗ ಯಾವ ರೀತಿ ನಿರ್ವಹಿಸಬೇಕು. ಮಹಿಳೆ ಮತ್ತು ಮಕ್ಕಳ ಭಾವನೆಗಳಿಗೆ ಘಾಸಿಯಾಗದಂತೆ ಪೊಲೀಸರು ಹೇಗೆ ಕೆಲಸ ಮಾಡಬಹುದು ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಕಾನೂನು ಚೌಕಟ್ಟುಗಳ ಕುರಿತು ತರಬೇತಿ ನೀಡಲಾಯಿತು. ಪ್ರತೀ ಠಾಣೆಯಲ್ಲಿರುವ ಮಕ್ಕಳ ಅಧಿಕಾರಿಗಳನ್ನು ಕೇಂದ್ರೀಕರಿಸಿ ಮಾಹಿತಿ ನೀಡಲಾಯಿತು. ಜಿಲ್ಲೆಯ 18 ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸಂಯೋಜಿಸಿದ ಈ ಕಾರ್ಯಾಗಾರದಲ್ಲಿ ಮಂಗಳೂರು ಸಂತ ಅಲೋಷಿಯಸ್ (ಸ್ವಾಯತ್ತ) ಕಾಲೇಜಿನ ಎಂಎಸ್‍ಡಬ್ಲ್ಯೂ ವಿಭಾಗ, ಸಿಡಬ್ಲ್ಯೂಸಿ ಮಂಗಳೂರು, ಡೀಡ್ಸ್ ಮಂಗಳೂರು ಸಂಸ್ಥೆಯವರು ಕಾರ್ಯಾಗಾರ ನಡೆಸಿಕೊಟ್ಟರು. ಶುಕ್ರವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button