ದ.29ರಂದು ಹನುಮಗಿರಿಯಲ್ಲಿ ಭಜನಾ ಸಂಭ್ರಮ….

ಪುತ್ತೂರು : ಪುತ್ತೂರು ತಾಲೂಕಿನ ಹನುಮಗಿರಿ ಕ್ಷೇತ್ರದಲ್ಲಿ ದ.29ರಂದು ನಡೆಯಲಿರುವ `ಭಜನಾ ಸಂಭ್ರಮ’ ಕಾರ್ಯಕ್ರಮದಲ್ಲಿ ದ.ಕ,ಉಡುಪಿ,ಕೊಡಗು ಹಾಗೂ ಕಾಸರಗೋಡು ಜಿಲ್ಲೆಯ 1400 ಭಜನಾ ತಂಡಗಳು ಪಾಲ್ಗೊಳ್ಳಲು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದು, ಪ್ರತೀ ಭಜನಾ ತಂಡದಿಂದ ತಲಾ 5 ಮಂದಿ ಸದಸ್ಯರಂತೆ 1400 ತಂಡಗಳ ಒಟ್ಟು 7 ಸಾವಿರ ಮಂದಿ ಭಜನಾ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಜನಾ ಸಂಭ್ರಮ ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಹಜ್ ರೈ ಬಳೆಜ್ಜ ತಿಳಿಸಿದ್ದಾರೆ.
ಹನುಮಗಿರಿ ಕ್ಷೇತ್ರದಲ್ಲಿ ಬುಧವಾರ ಭಜನಾ ಸಂಭ್ರಮ ತಯಾರಿ ಬಗ್ಗೆ ಮಾಹಿತಿ ನೀಡುತ್ತಾ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಂದು ಸಂಜೆ 6.02ಕ್ಕೆ 1400 ದೀಪಗಳನ್ನು ಹಚ್ಚಿ, 7ಸಾವಿರ ಹಣತೆಗಳನ್ನು ಬೆಳಗಿ ನಡೆಯುವ 48 ನಿಮಿಷಗಳ ಕಾಲದ ಭಜನಾ ಸಂಭ್ರಮ ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬರಲಿದೆ.
ಪುತ್ತೂರಿನ ಜಗದೀಶ್ ಆಚಾರ್ಯ ಮತ್ತು ರಾಮಕೃಷ್ಣ ಕಾಟುಕುಕ್ಕೆ ಸಂಗಡಿಗರು ಹಾಡುವ 6 ಭಜನೆಗಳನ್ನು 7ಸಾವಿರ ಮಂದಿ ಭಜಕರು ಏಕಕಾಲದಲ್ಲಿ ಹಾಡುವ ಈ ಕಾರ್ಯಕ್ರಮ ಇಂಡಿಯನ್ ಬಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆಯಾಗಿ ಮೂಡಿಬರಲಿದೆ ಎಂದರು.
ಮಂಗಳೂರು ವಿಭಾಗದ ಭಜನಾ ಮಹಾಮಂಡಲ ಹಾಗೂ ಹನುಮಗಿರಿ ಕ್ಷೇತ್ರದ ಆಶ್ರಯದಲ್ಲಿ ನಡೆಯಲಿರುವ ಈ ಭಜನಾ ಸಂಭ್ರಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ನಡೆದಿದೆ. 75ಸಾವಿರ ಚದರ ಅಡಿ ವಿಸ್ತೀರ್ಣದ ಭಜನಾಂಗಣದ ವ್ಯವಸ್ಥೆ ಮಾಡಲಾಗಿದ್ದು, ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ. ಪ್ರೇಕ್ಷಕರಿಗೆ ಈ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಭಜನಾಂಗಣದ ಸುತ್ತಲೂ ಆಸನ ಮತ್ತು ಗ್ಯಾಲರಿ ವ್ಯವಸ್ಥೆ ಮಾಡಲಾಗುತ್ತಿದೆ. 1ಸಾವಿರಕ್ಕೂ ಅಧಿಕ ಮಂದಿ ಸ್ವಯಂ ಸೇವಕರ ತಂಡ ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರದಷ್ಟು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು,20 ಸಾವಿರ ಮಂದಿಗೆ ಬೇಕಾಗುವ ಊಟೋಪಚಾರ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಭಜನಾ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಪುತ್ತೂರಿನಿಂದ ಹನುಮಗಿರಿಗೆ ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್‍ಗಳ ಓಡಾಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಜೆ 4-15ಕ್ಕೆ ಈಶ್ವರಮಂಗಲದ ಪಂಚಲಿಂಗೇಶ್ವರ ದೇವಳದ ಬಳಿಯಿಂದ `ಕೋಟಿ’ ಸಂಕೀರ್ತನಾ ಯಾತ್ರೆ ಮತ್ತು ಕಾವು ಈಶ್ವರಮಂಗಲ ರಸ್ತೆಯ ಪುಳಿತ್ತಡಿಯಿಂದ `ಚೆನ್ನಯ’ ಸಂಕೀರ್ತನಾ ಯಾತ್ರೆ ಏಕಕಾಲದಲ್ಲಿ ಹನುಮಗಿರಿ ತನಕ ನಡೆಯಲಿದೆ. ಕೋಟಿ ಸಂಕೀರ್ತನಾ ಯಾತ್ರೆಗೆ ಸುಳ್ಯ ಶಾಸಕ ಅಂಗಾರ ಮತ್ತು ಚೆನ್ನಯ ಸಂಕೀರ್ತನಾ ಯಾತ್ರೆಗೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡುವರು. ಈ ಶೋಭಾಯಾತ್ರೆಯಲ್ಲಿ ದಾಸ ಸಾಹಿತ್ಯದ ಪುಸ್ತಕದ ಪಲ್ಲಕಿ ಮೆರವಣಿಗೆ ನಡೆಯುವುದು ಎಂದು ಅವರು ತಿಳಿಸಿದರು.
ಭಜನಾ ಸಂಭ್ರಮ ಸ್ವಾಗತ ಸಮಿತಿಯ ಉಪಾಧ್ಯಕ್ಷ ಕೊಡ್ಮಣ್ಣು ಕಾಂತಪ್ಪ ಶೆಟ್ಟಿ, ವಿಭಾಗ ಸಂಯೋಜಕ ಪ್ರವೀಣ್ ಸರಳಾಯ, ನಿರ್ವಹಣಾ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ರೈ ಸಾಂತ್ಯ, ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button