ಮಾನವೀಯ ಮೌಲ್ಯಗಳ ಕಥಾಹಂದರ ‘ಅಮ್ಮ ನಿನ್ನ ತೋಳಿನಲ್ಲಿ’…

ಮಾನವೀಯ ಮೌಲ್ಯಗಳ ಕಥಾಹಂದರ ‘ಅಮ್ಮ ನಿನ್ನ ತೋಳಿನಲ್ಲಿ’…

ಆಧುನಿಕ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಪ್ರೀತಿ, ವಿಶ್ವಾಸ, ಕರುಣೆಗೆ ಬೆಲೆ ಇಲ್ಲದಂತಾಗಿದೆ. ಮನುಷ್ಯ ಮಾನವೀಯತೆಯನ್ನ ಮರೆತು ಸಂಕುಚಿತ ಮತ್ತು ಸ್ವಾರ್ಥ ಜೀವನವನ್ನು ನಡೆಸುತ್ತಿರುವುದು ವಿಪರ್ಯಾಸ. ಸ್ನೇಹ ಸಂಬಂಧಗಳೂ ಸಹ ಕಣ್ಮರೆಯಾಗುತ್ತಿವೆ. ನನ್ನವರು ತನ್ನವರು ಎಂಬ ಭಾವನೆ ಮಾನವನ ಮನದಲ್ಲಿ ನಶಿಸುತ್ತಿದೆ. ಮುಗ್ಧತೆಯನ್ನು ದುರುಪಯೋಗ ಮಾಡಿಕೊಳ್ಳುವ ಕಾಲ ಇದಾಗಿದೆ. ಇಂಥ ಸ್ವಾರ್ಥ ಮನಸ್ಸುಗಳ ಮಧ್ಯೆ ಮಾನವೀಯತೆಯ ಬೀಜವನ್ನು ಬಿತ್ತಿ, “ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಮಾನವೀಯ ಮೌಲ್ಯಗಳನ್ನು ಸಾರುವ ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿಯವರ ಕಥಾಸಂಕಲನವೇ “ಅಮ್ಮ ನಿನ್ನ ತೋಳಿನಲ್ಲಿ”.

ಸಾಹಿತ್ಯದಲ್ಲಿ ಕವಿತೆ, ನಾಟಕ, ಪ್ರಬಂಧಗಳಿಗಿರುವಂತೆ ಕಥೆಗಳೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿವೆ. ಹಿಂದಿನ ಕಾಲದಿಂದಲೂ ಹಿರಿಯರು ಮಕ್ಕಳನ್ನ ಮನರಂಜಿಸುವುದರ ಜೊತೆಗೆ ಅವರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು ನೀತಿ ಕಥೆಗಳನ್ನು ಹೇಳುತ್ತಿದ್ದರು. ಇಂತಹ ಸಾಮಾಜಿಕ ಕಳಕಳಿಯುಳ್ಳ ಕಥಾಗುಚ್ಛವೇ “ಅಮ್ಮ ನಿನ್ನ ತೋಳಿನಲ್ಲಿ”. 2017 ನೇ ಸಾಲಿನಲ್ಲಿ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಸೋಮಲಿಂಗಪ್ಪ ಬೆಣ್ಣೆ ಅವರ “ಅಮ್ಮ ನಿನ್ನ ತೋಳಿನಲ್ಲಿ” ಎಂಬ ಕಥಾಸಂಕಲನ ಆಯ್ಕೆಯಾಗಿರುವುದು ಲೇಖಕರ ಸೃಜನಶೀಲ ಬರವಣಿಗೆಯೇ ಸಾಕ್ಷಿ.

ಸೋಮಲಿಂಗಪ್ಪ ಬೆಣ್ಣಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದವರು. ವೃತ್ತಿಯಿಂದ ಶಿಕ್ಷಕರಾಗಿರುವ ಇವರಿಗೆ ಕಥೆಗಳನ್ನು ಬರೆಯುವುದು ಕಷ್ಟದ ಸಂಗತಿಯೇನಲ್ಲ. ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನು ಬೋಧಿಸುವಾಗ ಕಥೆಗಳ ಮೂಲಕ ವಿವರಿಸುವ ಕಲೆ ಇವರಿಗೆ ಕರಗತವಾಗಿರುವಂತೆ ತೋರುತ್ತದೆ. ಇವರು ವೃತ್ತಿಯಿಂದ ಶಿಕ್ಷಕರಾದರು ಪ್ರವೃತ್ತಿಯಿಂದ ಲೇಖಕರು ಮತ್ತು ಕವಿಗಳೂ ಹೌದು. ಇವರ ಹಲವಾರು ಕವಿತೆಗಳು ಮತ್ತು ವಿಭಿನ್ನ ಪರಿಕಲ್ಪನೆಯ ಲೇಖನಗಳು ರಾಜ್ಯದ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನ್ಯಾನೋ ಕಥೆಗಳನ್ನು ಬರೆಯುವುದರ ಮೂಲಕ ಓದುಗರ ಮನ ಗೆದ್ದಿದ್ದಾರೆ.

ಇವರ ಚೊಚ್ಚಲ ಕೃತಿ “ಅಮ್ಮ ನಿನ್ನ ತೋಳಿನಲ್ಲಿ” ಕಥಾಸಂಕಲನವು ಒಟ್ಟು 21 ಕಥೆಗಳನ್ನು ಒಳಗೊಂಡಿದೆ. “ಗೌರಮ್ಮಜ್ಜಿ ಇಲ್ಲವಾದ ಆ ದಿನ” ಎಂಬ ಕಥೆಯಿಂದ ಪ್ರಾರಂಭವಾಗುವ ಈ ಕಥಾಸಂಕಲನವು ಸೌಂದರ್ಯದ ಸೊಬಗನ್ನು ಮತ್ತು ಲೇಖಕರ ಬಾಲ್ಯದ ದಿನಗಳನ್ನು ನೆನಪಿಸುವ “ಮುಕ್ಕಣ್ಣನ ಕೆರೆ” ಕಥೆಯ ಮೂಲಕ ಕೊನೆಗೊಳ್ಳುತ್ತದೆ.

ಈ ಸಂಕಲನದಲ್ಲಿ ಬರುವ ಮೊದಲ ಕಥೆಯಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡು ಗೌರಮ್ಮಜ್ಜಿಯಲ್ಲಿಯೇ ಮಾತೃ ಮಮತೆಯನ್ನು ಕಂಡ ಬಾಲಕಿಯೇ ಕಾವೇರಿ. ಗೌರಮ್ಮಜ್ಜಿಯ ಸಾವಿನ ಸುದ್ದಿ ತಿಳಿದಾಗ ಕಾವೇರಿಯ ಮೂಕ ವೇದನೆಯನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

ಆಧುನಿಕ ಕಾಲದಲ್ಲಿ ಗುರು-ಶಿಷ್ಯರ ಸಂಬಂಧ ಶಾಲೆ ಮತ್ತು ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಗುರುವಿಗೆ ನೀಡುವ ಗೌರವ ಕಡಿಮೆಯಾಗುತ್ತಿದೆಯೇನೋ ಎಂದೆನಿಸುತ್ತಿದೆ. ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ಗುರುವಿನ ಮೇಲಿನ ಭಕ್ತಿಯನ್ನು ಸ್ಮರಿಸುವ ವಿದ್ಯಾರ್ಥಿಯ ಮನೋಭಾವ ಕಂಡು ಸಾರ್ಥಕವಾಯಿತು ಬದುಕು ಎಂಬ ಗುರು-ಶಿಷ್ಯರ ಸಂಬಂಧದ ಮಹತ್ವ “ಸಾರ್ಥಕ ಬದುಕು” ಕಥೆಯಲ್ಲಿ ವ್ಯಕ್ತವಾಗಿದೆ. ಕ್ಯಾನ್ಸರ್ ಪೀಡಿತರ ಸೇವೆಯಲ್ಲಿ ಆತ್ಮತೃಪ್ತಿಯನ್ನು ಕಾಣುವ ರಜಿಯಾಳ ಬದುಕು ನಿಜಕ್ಕೂ ಅನುಕರಣೀಯ. ಯಾವುದೇ ವಿಷಯದ ಆಳಕ್ಕಿಳಿದು ಅರ್ಥಮಾಡಿಕೊಂಡಾಗ ಮಾತ್ರ ಅದರ ಉದ್ದೇಶ ತಿಳಿಯುತ್ತದೆ, ಕೇವಲ ಹೊರನೋಟದಿಂದ ವ್ಯಕ್ತಿತ್ವ ಅಳೆಯುವುದು ಅಸಾಧ್ಯ ಎಂಬುದನ್ನು “ಧಮ್ ಹುಡುಗಿಯೊಬ್ಬಳ ಬದುಕಿನ ಬೆನ್ನಿಗೇ” ಕಥೆ ನಿರೂಪಿಸುತ್ತದೆ. ಬದಲಾಗುತ್ತಿರುವ ಜನರ ಜೀವನ ಶೈಲಿ, ಗ್ರಾಮಗಳನ್ನು ಬಿಟ್ಟು ನಗರದತ್ತ ಮುಖ ಮಾಡಿರುವ ಜನರ ಸಹಕಾರ, ಪ್ರೀತಿ, ನಂಬಿಕೆ ಎಲ್ಲವೂ ಪ್ರತಿಷ್ಠೆಯ ಒಳಗೆ ಸಮಾಧಿಯಾಗಿದೆ ಎಂದು ಹೇಳುವುದರ ಜೊತೆಗೆ ಜನರು ಜಾತಿಯತೆಯ ಕಡೆ ಮುಖಮಾಡಿ ಮಾನವೀಯತೆಯನ್ನು ಮರೆತಿದ್ದಾರೆ ಎಂದು ಲೇಖಕರು “ಜೋಲಿ ಬಸ್ಸು” ಕಥೆಯ ಮೂಲಕ ಬೇಸರ ವ್ಯಕ್ತಪಡಿಸುತ್ತಾರೆ. ಕಾಲೇಜಿನ ದಿನಗಳಲ್ಲಿ ಆಕರ್ಷಣೆಯನ್ನೇ ಪ್ರೀತಿ ಎಂದು ತಿಳಿದು ಅದರ ಮಾಯಾಜಾಲಕ್ಕೆ ಸಿಲುಕಿ ಪ್ರಾಣವನ್ನು ಕಳೆದುಕೊಂಡ ಅದೆಷ್ಟೋ ಯುವಕ-ಯುವತಿಯರ ಬದುಕನ್ನು “ಸಾಗರಿ ಐ ಮಿಸ್ ಯು” ಕಥೆ ವಿವರಿಸುತ್ತದೆ.

ಕುರುಬನ ಮುಗ್ಧತೆಯನ್ನು ಕಂಡ ಯುವಕನೊಬ್ಬ ಇಡೀ ರಾತ್ರಿ ಅವನ ಮೇಲೆ ಕುಳಿತು ನಾಟಕ ನೋಡಿದ ಸನ್ನಿವೇಶ ಅಲ್ಲಿರುವ ಎಲ್ಲರಿಗೂ ಹಾಸ್ಯವಾಗಿ ಕಂಡರೂ ಅಮಾನವೀಯ ಜಗತ್ತಿನಲ್ಲಿ ಅತಿಯಾದ ಮುಗ್ದತೆ ಅಪಾಯಕಾರಿ ಎಂಬ ಸತ್ಯವನ್ನು “ಮುಗ್ದ ಕುರುಬ” ಕಥೆಯಲ್ಲಿ ಓದುಗರನ್ನು ಎಚ್ಚರಿಸಿದ್ದಾರೆ. ವ್ಯಕ್ತಿಯ ವ್ಯಕ್ತಿತ್ವವನ್ನು ಅವನ ಮನಸ್ಸನ್ನು ನೋಡಿ ನಿರ್ಧರಿಸಬೇಕೆ ವಿನ: ಅವನ ಬಾಹ್ಯ ಚಟುವಟಿಕೆಗಳಿಂದಲ್ಲ. ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ಘಟನೆಯಿಂದ ಒಳ್ಳೆಯ ಪಾಠವನ್ನು ಕಲಿಯುತ್ತಾನೆ ಎಂಬುದಕ್ಕೆ ಈ ಕೃತಿಯಲ್ಲಿ ಬರುವ “ದೈವನಿಷ್ಠೆ” ಕಥೆಯೇ ಸಾಕ್ಷಿಯಾಗಿದೆ.

“ಅಮ್ಮ ನಿನ್ನ ತೋಳಿನಲ್ಲಿ” ಕಥೆಯಲ್ಲಿನ ಮುಗ್ಧ ಬಾಲಕಿಯ ಅಂತರಾಳದ ಮಾತುಗಳು ಕಣ್ಣೀರು ತರಿಸುತ್ತವೆ. ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ತಂದೆ-ತಾಯಿಗಳು ಮುಗ್ಧ ಮಗುವಿನ ಮನಸ್ಸಿನ ಭಾವನೆಗಳನ್ನು ಅರಿಯದೆ ತಾಯಿಯಿಂದ ಬೇರ್ಪಡಿಸಿರುವುದನ್ನು ಕಂಡು ಲೇಖಕರು ಈ ಕಥೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮಲಿಂಗಪ್ಪ ಬೆಣ್ಣೆ ಅವರು ವೃತ್ತಿಯಿಂದ ಶಿಕ್ಷಕರಾಗಿರುವ ಕಾರಣ ಅವರ ಹಲವಾರು ಕಥೆಗಳಲ್ಲಿ ಶಿಕ್ಷಕ-ವಿದ್ಯಾರ್ಥಿಗಳು ಕಾಣಿಸಿಕೊಳ್ಳುತ್ತಿರುವುದು ಈ ಕಥಾಸಂಕಲನದ ಮತ್ತೊಂದು ವಿಶೇಷವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ತರಗತಿಯಲ್ಲಿ ಅವರ ಭವಿಷ್ಯದ ಗುರಿಗಳ ಬಗ್ಗೆ ಪ್ರಶ್ನೆ ಮಾಡಿದಾಗ 3ನೇ ತರಗತಿ ವಿದ್ಯಾರ್ಥಿ ಆಯೆಷಾಳ ಉತ್ತರ ನಿಜಕ್ಕೂ ಶಿಕ್ಷಕರನ್ನು ಚಿಂತನೆಗೀಡು ಮಾಡುತ್ತದೆ. ಈಗಿನ ಕಾಲದಲ್ಲಿ ತಂದೆ-ತಾಯಿಗಳು ತಮಗೆ ಹೊರೆ ಎಂದು ಭಾವಿಸಿ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳೇ ಹೆಚ್ಚು ಅಂತದ್ದರಲ್ಲಿ 9 ವರ್ಷದ ವಿದ್ಯಾರ್ಥಿನಿ ದೊಡ್ಡವಳಾದಮೇಲೆ ತಾಯಿಯ ಸೇವೆ ಮಾಡುವ ಪರಮ ಗುರಿ ಹೊಂದಿರುವುದಾಗಿ ತಿಳಿಸುವ ಪರಿ ಓದುಗರನ್ನು ಆಶ್ಚರ್ಯಚಕಿತರಾಗುವಂತೆ ಮಾಡುತ್ತದೆ. ಆಡಂಬರದ ಭಕ್ತಿ ಮತ್ತು ಧಾರ್ಮಿಕ ಮೌಢ್ಯತೆಯನ್ನು ಬಿಟ್ಟು ದುಡಿಮೆಯಲ್ಲಿ ದೇವರನ್ನು ಕಾಣುವ ಪರಿ “ದೇವರ ಸೃಷ್ಟಿಕರ್ತ” ಕಥೆಯಲ್ಲಿ ಮೂಡಿಬಂದಿದೆ.

‘ಆಧುನಿಕ ಮಾತೃಭಕ್ತಿ’, ‘ಸಮಯಪ್ರಜ್ಞೆ’, ‘ಮಕ್ಕಳು ಕಲಿಸಿದ ಪಾಠ’, ‘ಶ್ರೀಮಂತ ಭಿಕ್ಷುಕ’, ‘ವಿಪರ್ಯಾಸ’, ‘ನಿಜದೇವರು’, ‘ಮುಖವಾಡ’ ಕಥೆಗಳು ಸಣ್ಣಕಥೆಗಳಂತೆ ತೋರಿದರೂ ಅವುಗಳು ಸಾರುವ ಸಂದೇಶ ಮಹತ್ವದ್ದಾಗಿದೆ. ಈ ಕಥಾಸಂಕಲನದ ಕೊನೆಯಲ್ಲಿ ಬರುವ ಮುಕ್ಕಣ್ಣನ ಕೆರೆ ಲೇಖಕರ ಬಾಲ್ಯದ ದಿನಗಳನ್ನು ಮೆಲುಕು ಹಾಕುವುದರ ಜೊತೆಗೆ ನಿಸರ್ಗ ಸೌಂದರ್ಯವನ್ನು ವಿವರಿಸುತ್ತದೆ. ಇವರ ಕಥಾಸಂಕಲನವು ಸಾಮಾಜಿಕ, ಧಾರ್ಮಿಕ ಮತ್ತು ಮಾನವೀಯ ಮೌಲ್ಯಗಳ ಜೊತೆಗೆ ಪ್ರೇಮದ ಭಾವನೆಗಳು ಮತ್ತು ಪ್ರಕೃತಿ ಸೌಂದರ್ಯದ ಕುರಿತಾಗಿರುವುದು ವಿಶೇಷ.

ಈ ಕೃತಿಗೆ ಹೆಸರಾಂತ ಲೇಖಕರಾದ ಸವದತ್ತಿಯ ಶ್ರೀ ನಾಗೇಶ್ ಜೆ. ನಾಯಕ ಹಾಗೂ ಭಾಗ್ಯನಗರದ ಶ್ರೀ ಅಕ್ಬರ್. ಸಿ. ಕಾಲಿಮಿರ್ಚಿ ಅವರು ಮುನ್ನುಡಿ ಬರೆದು ಮೌಲ್ಯವನ್ನು ಹೆಚ್ಚಿಸಿದರೆ ಕೊಪ್ಪಳದ ನಡೆದಾಡುವ ದೇವರು ಮ.ನಿ.ಪ್ರ.ಜ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೀತಿಯಿಂದ ಬೆನ್ನುಡಿ ಬರೆದು ಆಶೀರ್ವದಿಸಿರುವುದು ಈ ಕೃತಿಯ ಮತ್ತೊಂದು ವಿಶೇಷ.

ಬರಹ: ಶ್ರೀಧರ ಎಸ್ ವಾಣಿ.
ಕಲ್ಲತಾವರಗೇರಿ.
9972400298

Sponsors

Related Articles

Back to top button