ಸುದ್ದಿ

ಮರ ಕಡಿಯುತ್ತಿದ್ದ ವೇಳೆ ನಡೆದ ದುರ್ಘಟನೆ – ಮರ ಮೈಮೇಲೆ ಬಿದ್ದು ಕಾರ್ಮಿಕನ ಮೃತ್ಯು….

ಪುತ್ತೂರು : ಮರ ಕಡಿಯುತ್ತಿದ್ದ ವೇಳೆ ಮೈಮೇಲೆ ಮರ ಬಿದ್ದು ಗಂಭೀರ ಗಾಯಗೊಂಡ ಕಾರ್ಮಿಕರೊಬ್ಬರು ಆಸ್ಪತ್ರೆಗೆ ತರುತ್ತಿದ್ದ ವೇಳೆಯಲ್ಲಿ ಮೃತಪಟ್ಟ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಪಾಂಬಾರು ಸಮೀಪದ ಪಾರ್ಚೋಲು ಎಂಬಲ್ಲಿ ಭಾನುವಾರ ನಡೆದಿದೆ.
ಮೃತದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ತಂದಿದ್ದ ಮೂವರು ವ್ಯಕ್ತಿಗಳು ಆ ಬಳಿಕ ನಾಪತ್ತೆಯಾಗಿರುವುದು ಹಾಗೂ ಮರ ಕಡಿಯುವ ಕೆಲಸಕ್ಕೆ ಬಳಸಿಕೊಂಡ ವ್ಯಕ್ತಿಗಳು ಬಾರದೇ ಇರುವುದಕ್ಕೆ ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿದ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.
ಮೂಲತಃ ಸಕಲೇಶಪುರದವರಾಗಿದ್ದು, ಪ್ರಸ್ತುತ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಪೊಲೀಸ್ ಠಾಣೆಯ ಎದುರುಭಾಗದ ಬಾಡಿಗೆ ಮನೆಯೊಂದರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸ್ತವ್ಯವಿದ್ದ ರಫೀಕ್ ಅಹ್ಮದ್ (39) ಮೃತಪಟ್ಟ ವ್ಯಕ್ತಿ.
ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ಎಂಬಲ್ಲಿನ ರುಕ್ಯ ಎಂಬವರನ್ನು ವಿವಾಹವಾಗಿದ್ದ ರಫೀಕ್ ಅವರು ಕಳೆದ 15 ವರ್ಷಗಳಿಂದ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ಮನೆಮಾಡಿಕೊಂಡು ಪತ್ನಿ ಮಕ್ಕಳೊಂದಿಗೆ ವಾಸ್ತವ್ಯವಿದ್ದರು. ಮರ ಕಡಿಯುವ ಹಾಗೂ ಮರದ ದಿಮ್ಮಿಗಳನ್ನಾಗಿ ಪರಿವರ್ತಿಸುವ ಕಾಯಕ ನಡೆಸುತ್ತಿದ್ದರು. ಸಂಪ್ಯದಲ್ಲಿರುವ ಮರದ ಮಿಲ್ಲೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಇತ್ತೀಚೆಗಷ್ಟೇ ಪರ್ಪುಂಜದಲ್ಲಿನ ಮನೆಯನ್ನು ಬಾಡಿಗೆಗೆ ನೀಡಿ, ಸಂಪ್ಯದಲ್ಲಿ ಬಾಡಿಗೆ ಮನೆಮಾಡಿಕೊಂಡು ವಾಸ್ತವ್ಯವಿದ್ದರೆಂದು ತಿಳಿದು ಬಂದಿದೆ.
ಭಾನುವಾರ ಬೆಳಿಗ್ಗೆ ಸಂಪ್ಯ ಮಸೀದಿಯಲ್ಲಿ ನಡೆದಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಕರೆ ಬಂದ ಹಿನ್ನಲೆಯಲ್ಲಿ ಮರ ಕಡಿಯುವ ಕೆಲಸಕ್ಕೆ ಹೋಗಿದ್ದರೆಂದು ತಿಳಿದು ಬಂದಿದೆ.
ಭಾನುವಾರ ಮಧ್ಯಾಹ್ನ 1.30ರ ವೇಳೆಗೆ ಜೀಪೊಂದರಲ್ಲಿ ತಿಂಗಳಾಡಿ ತನಕ ತಂದಿದ್ದ ರಫೀಕ್ ಅಹ್ಮದ್ ಅವರ ಮೃತದೇಹವನ್ನು ಪುತ್ತೂರಿನ ಜೈಭಾರತ್ ಅಂಬ್ಯುಲೆನ್ಸ್ ಚಾಲಕ ಸಿರಾಜ್ ಎಂಬವರು ತಿಂಗಳಾಡಿಗೆ ತೆರಳಿ, ಅಲ್ಲಿಗೆ ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ತಂದಿದ್ದು, ಈ ಸಂದರ್ಭದಲ್ಲಿ ಜೀಪಿನಲ್ಲಿ ಮೃತದೇಹ ತಂದಿದ್ದ ಮೂವರು ಆಂಬ್ಯುಲೆನ್ಸ್‍ನಲ್ಲಿ ಜತೆಯಾಗಿ ಬಂದಿದ್ದರು. ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ ಬಳಿಕ ಜತೆಯಾಗಿ ಬಂದಿದ್ದ ಮೂವರು ನಾಪತ್ತೆಯಾಗಿದ್ದರು. ಇದು ಅಲ್ಲಿ ಸೆರಿದ್ದ ಮಂದಿಯ ಆಕ್ರೋಶಕ್ಕೆ ಕಾರಣವಾಯಿತು. ಈ ಘಟನೆಯ ಹಿನ್ನಲೆಯಲ್ಲಿ ಪುತ್ತೂರು ಠಾಣೆಯ ಪೊಲೀಸರನ್ನು ಆಸ್ಪತ್ರೆ ಬಳಿ ನಿಯೋಜಿಸಲಾಯಿತು.
ಮೃತರ ಪತ್ನಿ ರುಕ್ಯಾ ಹಾಗೂ ಸಂಬಂಧಿಕರು ಸಂಜೆ ವೇಳೆ ಬೆಳ್ಳಾರೆ ಠಾಣೆಗೆ ತೆರಳಿ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದು, ಬೆಳ್ಳಾರೆ ಪೊಲೀಸರು ರಾತ್ರಿ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪೊಲೀಸರಿಗೆ ನೀಡಿರುವ ದೂರಿನಲ್ಲಿ ರುಕ್ಯಾ ಅವರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button