ಸುದ್ದಿ

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ – ಒತ್ತಡಗಳ ಮಧ್ಯೆ ಪತ್ರಿಕೋದ್ಯಮ ಮೌಲ್ಯ ಕಾಪಾಡುವುದೇ ಸವಾಲು: ಮೋಹನ್ ಆಳ್ವ….

ಮಂಗಳೂರು: ಆಧುನಿಕ ಜೀವನದಲ್ಲಿ ವೃತ್ತಿ ಬದುಕಿನ ಒತ್ತಡಗಳ ಮಧ್ಯೆ ಪತ್ರಿಕಾರಂಗದ ಮೌಲ್ಯಗಳನ್ನು ಕಾಪಾಡುವುದೇ ಮಾಧ್ಯಮ, ಪ್ರತಕರ್ತನ ನಿಜವಾದ ಸವಾಲು ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ನ.18 ರಂದು ಆಯೋಜಿಸಲಾದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮಕ್ಕೆ ಪ್ರವೇಶಿಸುವ ಯುವ ಶಕ್ತಿಯು ಉತ್ಸಾಹದ ಭರದಲ್ಲಿ ಬರವಣಿಗೆಯ, ತಿಳುವಳಿಕೆಯ ಕೊರತೆ ಸಾಮಾನ್ಯ. ಬಹಳ ಜಾಗರೂಕತೆಯಿಂದ ಮುಂದೆ ಸಾಗಬೇಕಾಗಿದೆ. ಹಾಗೆಂದು ಋಣಾತ್ಮಕ ಚಿಂತನೆಯ ಅಗತ್ಯವಿಲ್ಲ. ಕಾಲವೇ ಎಲ್ಲವನ್ನೂ ನಿರ್ಧರಿಸುವುದರಿಂದ ಇಂತಹ ವ್ಯವಸ್ಥೆಯ ನಡುವೆಯೂ ಮಾಧ್ಯಮ ಯಾವುದರಲ್ಲೂ ರಾಜಿಯಾಗದೆ ವೌಲ್ಯವನ್ನು ಕಾಪಾಡಬೇಕಾಗಿದೆ ಎಂದರು.
ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತೀಯ ಕಾರ್ಯನಿರತರ ಪತ್ರಕರ್ತರ ಒಕ್ಕೂಟದ ಹೊಸದಿಲ್ಲಿಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಿಕೋದ್ಯಮ ಇಲ್ಲದೆ ದೇಶವನ್ನು ಊಹಿಸಲು ಅಸಾಧ್ಯ. ಪತ್ರಕರ್ತನಾದವನಿಗೆ ಕೆಲಸದಲ್ಲಿ ನಿಷ್ಠೆ, ಬದ್ಧತೆಯಿರಬೇಕಾಗಿದ್ದು ಅದೇ ಪತ್ರಿಕಾ ಧರ್ಮದ ಒಳಮರ್ಮ. ಪತ್ರಿಕೋದ್ಯಮ ದಾರಿ ತಪ್ಪಿದರೆ ದೇಶ ಕುಲಗೆಟ್ಟು ಹೋಗಲಿದೆ ಎಂದರು.
ವೇದಿಕೆಯಲ್ಲಿ ಸಾಹಿತಿ, ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು. ಆರ್.ಸಿ. ಭಟ್ ವಂದಿಸಿದರು.

Related Articles

Leave a Reply

Your email address will not be published.

Back to top button