ಸುದ್ದಿ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಟೂಡೆಂಟ್ ಇಂಡಕ್ಷನ್ ಪ್ರೋಗ್ರಾಮ್….

ಪುತ್ತೂರು: ಇತರರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವ ಭರದಲ್ಲಿ ನಮ್ಮಲ್ಲಿರುವ ಶಕ್ತಿಯನ್ನೇ ನಾವು ಮರೆತು ಬಿಡುತ್ತೇವೆ. ಇದು ನಮ್ಮ ಜೀವನದ ಅತ್ಯಂತ ಕೆಟ್ಟ ಅಭ್ಯಾಸ ಎಂದು ಪುತ್ತೂರಿನ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ಟೂಡೆಂಟ್ ಇಂಡಕ್ಷನ್ ಪ್ರೋಗ್ರಾಮ್ ನ ದ್ವಿತೀಯ ಚರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಅವರದ್ದೇ ಆದ ಪ್ರತಿಭೆಗಳಿವೆ ಅದನ್ನು ಗುರುತಿಸಿ ಬೆಳೆಸುವ ಬದಲು ನಾವು ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು ಕೊರಗುತ್ತೇವೆ ಎಂದ ಅವರು ಪ್ರಸ್ತುತ ಅಂತರ್ ವಿಭಾಗ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದ್ದು, ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ ಕಾಲೇಜು ಶಿಕ್ಷಣದೊಂದಿಗೆ ಉದ್ಯಮಗಳು ಬಯಸುವ ಪೂರಕ ಜ್ಞಾನವನ್ನು ಪಡೆದುಕೊಳ್ಳಬೇಕು. ಒಟ್ಟಿನಲ್ಲಿ ನಮ್ಮ ಮುಂದಿನ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುವ ಶಿಕ್ಷಣದ ಬಗ್ಗೆ ಆಲಸಿಗಳಾಗದೆ ಆಸಕ್ತಿಯಿಂದ ಕಲಿಯುವಂತೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡುವ, ತನ್ನಲ್ಲಿ ಅಡಕವಾಗಿರುವ ವಿಶೇಷ ಕೌಶಲ್ಯವನ್ನು ಗುರುತಿಸುವ ತನ್ಮೂಲಕ ಶೈಕ್ಷಣಿಕ ಔನ್ನತ್ಯವನ್ನು ಸಾಧಿಸಲು ನೆರವಾಗುವ ಇಂತಹ ಕಾರ್ಯಕ್ರಮವನ್ನು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಪಠ್ಯಕ್ರಮದ ಭಾಗವಾಗಿಸಿದೆ ಮತ್ತು ಇದಕ್ಕೆ ಮಹತ್ವವನ್ನು ನೀಡುತ್ತದೆ. ವಿವಿಧ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡುವ ಈ ಉಪಯುಕ್ತ ಕಾರ್ಯಕ್ರಮದ ಪೂರ್ಣ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್.ಪಿ ಮಾತನಾಡಿ ಇಂದಿನ ದಿನಗಳಲ್ಲಿ ವ್ಯಕ್ತಿಯ ನೈತಿಕ ಮಟ್ಟವನ್ನು ಹೆಚ್ಚಿಸುವ ಸಂಸ್ಕಾರ ಭರಿತ ಶಿಕ್ಷಣದ ಅಗತ್ಯವಿದೆ ಎಂದರು. ಸಮಾಜದಲ್ಲಿ ತನ್ನನ್ನು ತಾನು ಎತ್ತರಿಸಿಕೊಳ್ಳಲು ಸಾಮಾಜಿಕ ಹಾಗೂ ಸೇವಾಧಾರಿತ ಶಿಕ್ಷಣ ಪದ್ದತಿಯು ಸಹಕಾರಿಯಾಗುತ್ತದೆ . ವಿವಿಧ ಕ್ಷೇತ್ರಗಳಲ್ಲಿ ಪರಿಣತರಾದ ಸಂಪನ್ಮೂಲ ವ್ಯಕ್ತಿಗಳು ನಡೆಸುವ ಈ ಕಾರ್ಯಕ್ರಮದ ಪೂರ್ಣ ಪ್ರಯೋಜನವನ್ನು ಪಡೆದು ಉತ್ತಮ ಸಾಧಕರಾಗುವಂತೆ ವಿನಂತಿಸಿದರು.
ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ, ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್.ಬಿ, ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ, ಸಂಪನ್ಮೂಲ ವ್ಯಕ್ತಿ ಆನಂದ ಭಟ್ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಮಹೇಶ್.ಕೆ.ಕೆ ಸ್ವಾಗತಿಸಿ, ಪ್ರೊ.ಸೌಮ್ಯ.ಎಸ್ ವಂದಿಸಿದರು. ವಿದ್ಯಾರ್ಥಿನಿಯರಾದ ವಿಶ್ಮಿತಾ.ಕೆ.ಶೆಟ್ಟಿ ಹಾಗೂ ಭಾವನಾ.ಎಂ.ಆರ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Leave a Reply

Your email address will not be published.

Back to top button