ವಿವೇಕಾನಂದ ವಿದ್ಯಾವರ್ಧಕ ಸಂಘದ ಯಶಸ್ನಿಂದ ರಾಜ್ಯಮಟ್ಟದ ಕಾರ್ಯಾಗಾರ……
ಪುತ್ತೂರು: ಕಳೆದ ಎಪ್ಪತ್ತು ವರ್ಷಗಳಲ್ಲಿ ಬಡತನದ ರೇಖೆಗಿಂತ ಕೆಳಗುಳಿದ ಸುಮಾರು ಶೇ. 60ರಷ್ಟು ಜನರನ್ನು ಮೇಲೆತ್ತಲು ಆಗಿರಲಿಲ್ಲ. ಹೀಗಿದ್ದಾಗ ಹೇಗೆ ತಾನೇ ದೇಶಕ್ಕೆ ಗೌರವ ದೊರಕುವುದಕ್ಕೆ ಸಾಧ್ಯ? ಆದರೆ ಇಂದು ದೇಶ ಅಭಿವೃದ್ಧಿ ಸಾಧಿಸುತ್ತಿದೆ. ಹಾಗಾಗಿಯೇ ದೇಶಕ್ಕೆ ಎಲ್ಲೆಡೆ, ವಿದೇಶದಲ್ಲೂ ಗೌರವ ಸಿಗುತ್ತಿದೆ. ಸರ್ಕಾರ ಮತ್ತು ಆಡಳಿತ ವರ್ಗ ಸರಿಯಾಗಿ ಕಾರ್ಯನಿರ್ವಹಿಸಿದಾಗ ಸಾಧನೆ ಸಾಧ್ಯವಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಕಲ್ಲದ್ದಲು ಮತ್ತು ಗಣಿಗಾರಿಕೆ ಖಾತೆ ಸಚಿವ ಪ್ರಹ್ಲಾದ್ ವಿ ಜೋಷಿ ಹೇಳಿದರು.
ಅವರು ಸೋಮವಾರ ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ `ಯಶಸ್’ ಅಧ್ಯಯನ ಕೇಂದ್ರದಿಂದ ಆಯೋಜಿಸಲಾದ ಐಎಎಸ್, ಕೆಎಎಸ್ ತರಬೇತಿ ಅಕಾಡೆಮಿ ಹಾಗೂ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ `ದೃಷ್ಟಿ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಬದುಕಿನಲ್ಲಿ ಸುಲಭಸಾಧ್ಯ ವಿಚಾರಡೆಗೆ ನಾವು ಆದ್ಯತೆ ನೀಡುತ್ತೇವೆ. ಆದರೆ ನಾಗರಿಕ ಸೇವಾ ಪರೀಕ್ಷೆ ತೇರ್ಗಡೆಯಾದವರಿಗೆ ಅಪಾರ ಗೌರವ ದೊರಕುತ್ತದೆ ಮಾತ್ರವಲ್ಲದೆ ಸಾವಿರಾರು ಮಂದಿಗೆ ಒಳಿತನ್ನು ಮಾಡುವುದಕ್ಕೆ ಇದರಿಂದ ಸಾಧ್ಯ ಎಂಬುದನ್ನು ಗಮನಿಸಬೇಕು. ಸರ್ಕಾರ ಹಾಗೂ ಅಡಳಿತ ವರ್ಗ ಎರಡೂ ಸಮಾಜದ ಏಳಿಗೆಗೆ ಅತ್ಯಂತ ಮುಖ್ಯ. ಸರ್ಕಾರ ರೂಪಿಸಿದ ಯೋಜನೆಯನ್ನು ಸಮರ್ಥವಾಗಿ ಅಧಿಕಾರಿಗಳು ಜಾರಿಗೆ ತಂದಾಗ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಮಂಗಳೂರು ನಗರ ಪೋಲಿಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮಾತನಾಡಿ ಯುವಜನರಿಗೆ ಇಂದು ಸಾಕಷ್ಟು ಅವಕಾಶಗಳಿವೆ. ಹಾಗಾಗಿ ಯಾಕೆ ನಾಗರಿಕ ಸೇವೆಯನ್ನೇ ಆಯ್ಕೆ ಮಾಡಬೇಕೆಂಬ ಪ್ರಶ್ನೆ ಬರುವುದು ಸಹಜ. ಆದರೆ ಐಎಎಸ್, ಐಪಿಎಸ್, ಕೆಎಎಸ್ ನಂತಹ ಪರೀಕ್ಷೆಗಳನ್ನು ತೇರ್ಗಡೆ ಮಾಡುವುದರಿಂದ ಉಳಿದೆಲ್ಲಾ ರಂಗದಲ್ಲಿ ದೊರಕಬಹುದಾದ ಅಷ್ಟೂ ಅವಕಾಶಗಳು ಒಂದೇ ಕಡೆ ದೊರೆಯುವುದಕ್ಕೆ ಸಾಧ್ಯ. ಸಮಾಜಸೇವೆಯ ಮೂಲಕ ಬದುಕನ್ನು ಸಾರ್ಥಕಗೊಳಿಸುವುದಕ್ಕೆ ಇಲ್ಲಿ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ನಮ್ಮಲ್ಲಿ ಬೇಕಾದಷ್ಟು ಐಎಎಸ್ ಕೋಚಿಂಗ್ ಸೆಂಟರ್ ಗಳಿವೆ. ಆದರೆ ಯಶಸ್ ರಾಷ್ಟ್ರೀಯ ದೃಷ್ಟಿಕೋನವನ್ನು ತುಂಬುವ ಮತ್ತು ತನ್ಮೂಲಕ ದೇಶದ ಕುರಿತಾಗಿ ಚಿಂತಿಸುವ ಅಧಿಕಾರಿ ವರ್ಗದ ಸೃಷ್ಟಿಯ ಹಿನ್ನೆಲೆಯಲ್ಲಿ ಆರಂಭಗೊಂಡಿದೆ. ಪ್ರಸ್ತುತ ದೇಶದ ಸಂಸ್ಕೃತಿ, ಜೀವನ ಮೌಲ್ಯಗಳನ್ನು ಮುಂದುವರೆಸುವ ಕಾರ್ಯವನ್ನು ಮಾಡುವ ಅಧಿಕಾರಿಗಳು ನಮಗೆ ಬೇಕಾಗಿದೆ ಎಂದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಯಶಸ್ ಅಧ್ಯಯನ ಕೇಂದ್ರದ ಸಂಯೋಜಕ ಗೋವಿಂದರಾಜ ಶರ್ಮ ಉಪಸ್ಥಿತರಿದ್ದರು.
ಯಶಸ್ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಮುರಳಿಕೃಷ್ಣ ಕೆ.ಎನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೇಂದ್ರದ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ವಂದಿಸಿದರು. ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ.ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.