ಸುದ್ದಿ

ಶಾಸಕ ಖಾದರ್‌ಗೆ ಬೆದರಿಕೆ – ಸುಮೋಟೋ ಪ್ರಕರಣ ದಾಖಲಿಸುವಂತೆ ಹರೀಶ್‌ ಕುಮಾರ್‌ ಒತ್ತಾಯ….

ಮಂಗಳೂರು : ಶಾಸಕ ಯು ಟಿ ಖಾದರ್‌ ಅವರಿಗೆ ಬೆದರಿಕೆ ಹಾಕಿದ ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನಗರ ಪೊಲೀಸ್ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪೌರತ್ವ ತಿದ್ದುಪಡಿ ಕಾಯ್ದೆ ಪರ ರ್‍ಯಾಲಿಯಲ್ಲಿ, ಕೆಲವು ಯುವಕರು ಶಾಸಕ ಯು.ಟಿ. ಖಾದರ್ ಅವರಿಗೆ ಬೆದರಿಕೆ ಹಾಕಿ ಘೋಷಣೆ ಕೂಗಿದ್ದು, ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತುವವರನ್ನು ರಾಷ್ಟ್ರ ವಿರೋಧಿಗಳು ಎಂದು ಅವರು ಕರೆಯುತ್ತಾರೆ. ಹಾಗಾದರೆ ಮಾರಣಾಂತಿಕ ಬೆದರಿಕೆಗಳನ್ನು ಒಡ್ಡುವ ಜನರನ್ನು ನಾವು ಏನೆಂದು ಕರೆಯಬೇಕು? ಎಂದು ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.

“ಶಾಸಕ ಯುಟಿ ಖಾದರ್ ಅವರಿಗೆ ಬೆದರಿಕೆ ಹಾಕಿದ ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸುವಂತೆ ಹಾಗೂ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ನಾನು ನಗರ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡುತ್ತೇನೆ. ಎರಡು ವಾರಗಳಲ್ಲಿ ಅವರು ಕ್ರಮಕೈಗೊಳ್ಳಲು ವಿಫಲವಾದರೆ, ಜಿಲ್ಲಾ ಕಾಂಗ್ರೆಸ್ ಪೊಲೀಸ್‌ ಆಯುಕ್ತರ ಕಚೇರಿಯ ಎದುರು ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಿಎಎ ಕುರಿತು ಫೆ.6 ರಂದು ಕಾರ್ಡೆಲ್ ಹಾಲ್ ಕುಲಶೇಖರದಲ್ಲಿ ಕಾರ್ಯಾಗಾರವನ್ನು ನಡೆಸಲಿದ್ದು, ಶಾಸಕರು, ಮಾಜಿ ಶಾಸಕರು, ಎಂಸಿಸಿ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಿ ಆರ್ ಶಂಕರ್, ಕಾರ್ಯಕರ್ತ ಭವ್ಯ ನರಸಿಂಹ ಮೂರ್ತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದೂ ಅವರು ತಿಳಿಸಿದರು.
ಮಾಜಿ ಶಾಸಕ ಜೆ ಆರ್ ಲೋಬೊ, ಮಾಜಿ ಮೇಯರ್ ಕವಿತಾ ಸನೀಲ್‌, ಕಾರ್ಪೊರೇಟರ್, ಶಶಿಧರ್ ಹೆಗ್ಡೆ ಮತ್ತು ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button