ಸಂತ ಫಿಲೋಮಿನಾದಲ್ಲಿ ರಾಷ್ಟ್ರ ಮಟ್ಟದ ಮ್ಯಾನೆಜ್ಮೆಂಟ್ ಫೆಸ್ಟ್ `ಫ್ಯಾಕುಲಾ-2019′ ಉದ್ಘಾಟನೆ….
ಪುತ್ತೂರು: ವಿದ್ಯಾರ್ಥಿ ಬದುಕು ಮಾನವನ ಜೀವನದ ಒಂದು ಪ್ರಮುಖ ಘಟ್ಟ. ಈ ಹಂತದಲ್ಲಿ ಸ್ಪಷ್ಟ ಗುರಿ, ಸತತ ಪರಿಶ್ರಮ, ಸಾಧಿಸುವ ಛಲ ಮತ್ತು ಪೂರಕ ತಯಾರಿಯೊಂದಿಗೆ ಮುನ್ನುಗ್ಗುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದು ದುಬೈಯ ಟಾಬ್ಕೊ ಎಮಿರೇಟ್ಸ್ ಎಲ್ಎಲ್ಸಿಯ ಆಪರೇಶನ್ ಮ್ಯಾನೇಜರ್ ಶಿವಕಿರಣ್ ರೈ ಹೇಳಿದರು.
ಅವರು ಬುಧವಾರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು ಐಕ್ಯೂಎಸಿ ಸಹಯೋಗದಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಆಯೋಜಿಸಿದ ರಾಷ್ಟ್ರ ಮಟ್ಟದ ಮ್ಯಾನೆಜ್ಮೆಂಟ್ ಫೆಸ್ಟ್ ಫ್ಯಾಕುಲಾ 2019 `ಮೋನಾರ್ಚ್’ ನ್ನು ಕಾಲೇಜ್ನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜ್ನ ಪ್ರಾಂಶುಪಾಲ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ವಿದ್ಯಾರ್ಥಿಗಳು ರಚನಾತ್ಮಕ ಚಿಂತನೆಗಳಿಗೆ ತಮ್ಮ ಸಮಯವನ್ನು ಬಳಸಬೇಕು. ಪ್ರಸ್ತುತ ಎಲ್ಲಾ ಕಡೆ ಅಸಮತೋಲನ ಪರಿಸ್ಥಿತಿ ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ಮಿಗುತೆಯನ್ನು ಹೆಚ್ಚಿಸುವ ಚಿಂತನೆಯನ್ನು ಹೊಂದಿರಬೇಕು. ದೇಶ ಕಟ್ಟುವ, ಯಶಸ್ಸನ್ನು ಉತ್ತುಂಗಕ್ಕೇರಿಸುವ ಮನೋಗುಣ ಹೊಂದಿದಾಗ ಪ್ರಗತಿಯ ಶಿಖರವನ್ನೇರಲು ಸಾಧ್ಯ ಎಂದರು.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೊತ್ಸಾಹಿಸುವ ಉದ್ದೇಶದಿಂದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಬೆಸ್ಟ್ ಮ್ಯಾನೇಜರ್, ಮೋಕ್ ಪ್ರೆಸ್, ಪಬ್ಲಿಕ್ ರಿಲೇಶನ್ ಮತ್ತು ಫೈನಾನ್ಸ್ ಎಕ್ಸ್ಪರ್ಟ್ ಎಂಬ ಸ್ಪರ್ಧೆಗಳಲ್ಲಿ 11 ತಂಡಗಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬಿಸಿನೆಸ್ ಕ್ವಿಜ್, ಎಕ್ಸ್ಟೆಂಪೊರ್, ಡಿಬೆಟ್ತ್ ಫೋಕ್/ವೆಸ್ಟರ್ನ್ ಡ್ಯಾನ್ಸ್, ಪೋಸ್ಟರ್ ಮೇಕಿಂಗ್ ಎಂಬ ಸ್ಪರ್ಧೆಗಳಲ್ಲಿ 10 ತಂಡಗಳು ಪಾಲ್ಗೊಂಡಿತ್ತು.
ಕಾಲೇಜ್ನ ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥ ರಾಧಾಕೃಷ್ಣ ಗೌಡ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ವಿಬಿನ್ ಟಿ ಟಿ ವಂದಿಸಿದರು. ಅನುರಾಧಾ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು. ಫ್ಯಾಕುಲಾ ಸ್ಟಾಫ್ ಸಂಯೋಜಕ ಅಭಿಷೇಕ್ ಸುವರ್ಣ, ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ, ಪುಷ್ಪಾ ಎನ್ ಮತ್ತು ಹರ್ಷಿತ್ ಆರ್ ಸಹಕರಿಸಿದರು.