ಸುದ್ದಿ

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಎಲ್ಲಾ ವಿಭಾಗಗಳಿಗೆ NBA ಮಾನ್ಯತೆ….

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ನ ಎಲ್ಲಾ ಇಂಜಿನಿಯರಿಂಗ್ ವಿಭಾಗಗಳಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (National Board of Accreditation ) ಮಾನ್ಯತೆ ದೊರೆತಿರುತ್ತದೆ.
ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್ (NBA ) ನವದೆಹಲಿ ಈ ಕೆಳಗಿನ ಐದು ವಿಭಾಗಗಳಿಗೆ ಮಾನ್ಯತೆ ನೀಡಿದೆ.
•ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್
•ಮೆಕ್ಯಾನಿಕಲ್‍ ಇಂಜಿನಿಯರಿಂಗ್
•ಸಿವಿಲ್‍ ಇಂಜಿನಿಯರಿಂಗ್
•ಇನ್ ಫಾರ್ಮೇಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್
•ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್‍ ಇಂಜಿನಿಯರಿಂಗ್

ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ್ ರಾವ್ ಕುಂಟೆ, ಎನ್.ಬಿ.ಎ. ಪರಿಣತರ ಸಮಿತಿಯು ಸಹ್ಯಾದ್ರಿ ಕಾಲೇಜಿನ ಐದು ವಿಭಾಗಗಳನ್ನು ಜ. 31 ರಿಂದ ಫೆ. 2 ರವರೆಗೆ ಸಂದರ್ಶಿಸಿ ಮೌಲ್ಯಮಾಪನ ಮಾಡಿದ್ದರು. ಕಾಲೇಜಿನ ಎಲ್ಲಾ ಐದು ಬ್ರಾಂಚ್ ಗಳಿಗೆ ಮೂರು ವರ್ಷಗಳ (2020-2023) ಅವಧಿಗೆ ಎನ್.ಬಿ.ಎ. ಅಕ್ರಿಡಿಯೇಷನ್‍ ದೊರೆಯುವ ಮೂಲಕ ಸಹ್ಯಾದ್ರಿ ಕಾಲೇಜು ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ ಎಂದರು.
NBA ಯು ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ (AICTE) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸುವ ಜತೆಗೆ ಭಾರತದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಸ್ವಾಯತ್ತ ಸಂಸ್ಥೆಯಾಗಿದೆ.
AICTE ಯು ನಿಗದಿಪಡಿಸಿದ ರೀತಿಯಲ್ಲಿ ಕಾಲೇಜಿನ ಶೈಕ್ಷಣಿಕ ಸೌಲಭ್ಯಗಳು, ಪಾಠ ಪ್ರವಚನಗಳು, ಮೂಲಭೂತ ಸೌಕರ್ಯಗಳು, ಪ್ರಯೋಗಾಲಯಗಳು, ಕ್ರೀಡಾ ಸವಲತ್ತುಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕ್ಯಾಂಪಸ್ ನೇಮಕಾತಿ, ಕ್ಯಾಂಟೀನ್ ಸೌಲಭ್ಯ, ಹಾಸ್ಟೆಲ್ ಇವೇ ಮುಂತಾದ ಹತ್ತು ಹಲವು ಸೌಲಭ್ಯಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಈ ಮಾನ್ಯತೆಯನ್ನು ನೀಡಲಾಗಿದೆ.

ಎನ್.ಬಿ.ಎ. ಮಾನ್ಯತೆಯ ಪ್ರಯೋಜನಗಳು:
ಔಟ್‍ಕಮ್ ಬೇಸ್ಡ್‍ ಎಜ್ಯುಕೇಶನ್‍ ಅಂದರೆ, ವಿದ್ಯಾರ್ಥಿಯ ಒಟ್ಟು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೊಡಮಾಡುವ ವಿದ್ಯಾರ್ಜನೆಯು ಟೀಚಿಂಗ್ – ಲರ್ನಿಂಗ್ ಕ್ರಮ ಹಾಗೂ ವಿಷಯಾನುಸೂಚಿಯ ಫಲಿತಗಳನ್ನಿಟ್ಟುಕೊಂಡು ಅಟೈನ್ ಮೆಂಟ್ ಮೂಲಕ ವಿದ್ಯಾರ್ಥಿಗಳ ಇಂಜಿನಿಯರಿಂಗ್ ವಿದ್ಯಾಭ್ಯಾಸ ಉತ್ತಮ ರೀತಿಯಲ್ಲಿ ಪೂರ್ಣಗೊಳ್ಳುವಂತೆ ಮೌಲ್ಯಮಾಪನ ಮಾಡಲಾಗುತ್ತದೆ.
•ಎನ್.ಬಿ.ಎ. ಅಕ್ರಿಡಿಯೇಶನ್‍ ಆಗಿರುವ ಸಂಸ್ಥೆಯಿಂದ ವಿದ್ಯಾರ್ಹತೆ ಪಡೆದು ಹೊರಬರುವ ವಿದ್ಯಾರ್ಥಿಯ ಡಿಗ್ರಿ ಪ್ರಪಂಚದಾದ್ಯಂತ ಮಾನ್ಯತೆ ಪಡೆದಿರುತ್ತದೆ.
•ವಿದ್ಯಾರ್ಥಿಗಳಿಗೆ ಶ್ರೇಷ್ಠ ಕಂಪನಿಗಳಲ್ಲಿ ಉದ್ಯೋಗವಕಾಶಕ್ಕೆ ಮೊದಲ ಆದ್ಯತೆ ಇರುತ್ತದೆ. ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೂ ಹೆಚ್ಚು ಅನುಕೂಲಕರವಾಗಿದೆ.
•ಎನ್.ಬಿ.ಎ. ಮಾನ್ಯತೆ ಹೊಂದಿರುವ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನುನೀಡುವುದರಿಂದ, ವಿದ್ಯಾರ್ಥಿಗಳಿಗೂ ತಮ್ಮ ಕೌಶಲವನ್ನು ಅಭಿವೃದ್ಧಿ ಪಡಿಸಲು ಮತ್ತು ಜ್ಞಾನಾರ್ಜನೆಗೆ ಸಹಕಾರಿಯಾಗಿದೆ.
•ಸಂಶೋಧನಾ ಸಹಕಾರಿ ಸಂಸ್ಥೆಗಳಿಂದ ನಾನಾ ರೀತಿಯ ಸಂಶೋಧನೆಗಳಿಗೆ ಧನ ಸಹಾಯವನ್ನು ಅಪೇಕ್ಷಿಸಲು ಕೂಡಾ ಎನ್.ಬಿ.ಎ. ಮಾನ್ಯತೆ ಸಹಕಾರಿಯಾಗಿದೆ.

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಸಂಸ್ಥೆಯು 2017ರಲ್ಲಿಯೇ ನ್ಯಾಕ್ ನಿಂದ “ಎ ” ಗ್ರೇಡ್ ಮಾನ್ಯತೆ ಪಡೆದಿತ್ತು. ಪ್ರಸ್ತುತ ದೊರೆತಂತಹ ಎನ್.ಬಿ.ಎ. ಮಾನ್ಯತೆ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಮತ್ತಷ್ಟು ಜವಾಬ್ಧಾರಿಯುತವಾದ ಬದ್ಧತೆಯನ್ನು ನೀಡಿದೆ.
ಎನ್.ಬಿ.ಎ. ಪರಿಣತರ ಸಮಿತಿಯು ಸಹ್ಯಾದ್ರಿ ಕಾಲೇಜಿನ ಔಟ್‍ಕಮ್ ಬೇಸ್ಡ್ ಶಿಕ್ಷಣ ಕ್ರಮವನ್ನು ಹಾಗೂ ಸಂಸ್ಥೆಯಲ್ಲಿ ಅಳವಡಿಸಿಕೊಂಡಿರುವ ಇನಿಶಿಯೇಟಿವ್ಸ್ ಗಳಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
ಉಪ ಪ್ರಾಂಶುಪಾಲ ಪ್ರೊ. ಎಸ್.ಎಸ್. ಬಾಲಕೃಷ್ಣ , ಡೀನ್ ಅಕಾಡೆಮಿಕ್ಸ್ ಡಾ.ರಾಜೇಶ್, ಮೆಕ್ಯಾನಿಕಲ್‍ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ರವಿಚಂದ್ರ ಕೆ.ಆರ್, ಇನ್ ಫಾರ್ಮೇಶನ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ.ಶಮಂತ್ ರೈ , ಮಾಧ್ಯಮ ಸಲಹೆಗಾರ ವಸಂತ್ ಕೇದಿಗೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button