ಈಜು ಸ್ಪರ್ಧೆ: ನೀಲ್ ಮಸ್ಕರೇನಸ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ….
ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ಬೆಂಗಳೂರಿನ ಈಜುಕೊಳದಲ್ಲಿ ಏರ್ಪಡಿಸಿದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ (ಪಿಸಿಎಂಬಿ) ವಿಭಾಗದ ವಿದ್ಯಾರ್ಥಿ ನೀಲ್ ಮಸ್ಕರೇನ್ಹಸ್ ಅವರು 1 ಚಿನ್ನ ಹಾಗೂ 3 ಬೆಳ್ಳಿ ಹಾಗೂ 1 ಕಂಚಿನ ಪದಕದ ಸಾಧನೆಯೊಂದಿಗೆ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ನೀಲ್ ಮಸ್ಕರೇನ್ಹಸ್ ಅವರು 50 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಚಿನ್ನದ ಪದಕ, 100 ಮೀ. ಮತ್ತು 200 ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ, 4*100 ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ ಹಾಗೂ 4*100 ಮೀ ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈ ಸಾಧನೆಯೊಂದಿಗೆ ಅವರು ನವೆಂಬರ್ 18 ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.
ಪುತ್ತೂರಿನ ಸಾಮೆತ್ತಡ್ಕ ನಿವಾಸಿಯಾಗಿದ್ದು, ಸಂತ ಫಿಲೋಮಿನಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಡಾ.ನೋರ್ಬರ್ಟ್ ಮಸ್ಕರೇನ್ಹಸ್ ಹಾಗೂ ಮುಕ್ರಂಪಾಡಿ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರಮೀಳಾ ಕ್ರಾಸ್ತಾ ದಂಪತಿಯ ಪುತ್ರರಾದ ನೀಲ್ ಮಸ್ಕರೇನ್ಹಸ್ ಅವರು ಪುತ್ತೂರಿನ ಪರ್ಲಡ್ಕದಲ್ಲಿರುವ ಬಾಲವನ ಈಜುಕೊಳದಲ್ಲಿ ಈಜು ತರಬೇತುದಾರರಾದ ಪಾರ್ಥ ವಾರಣಾಶಿ ಹಾಗೂ ನಿರೂಪ್ ಜೆ.ಆರ್ ಅವರಿಂದ ತರಬೇತು ಪಡೆದಿದ್ದರು. ಪ್ರಸ್ತುತ ಅವರು ಬೆಂಗಳೂರಿನಲ್ಲಿ ಈಜು ತರಬೇತು ಪಡೆಯುತ್ತಿದ್ದಾರೆ.