ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ – ಪ್ರತಿಭಟನಾ ಸಭೆ…
ಬಂಟ್ವಾಳ: ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಬಂಟ್ವಾಳ ತಾಲೂಕಿನ 20 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾದು ಹೋಗಲಿದ್ದು, ಈ ಬಗ್ಗೆ ಯಾವುದೇ ಮಾಹಿತಿ ರೈತರಿಗೆ ನೀಡದೆ, ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಂಬಂಧಿಸಿದ ರೈತರ ಪೂರ್ವಾನುಮತಿ ಇಲ್ಲದೆ ಸರ್ವೆ ಕಾರ್ಯ ನಡೆಸಲಾಗಿದ್ದು, ಈ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಬಿಸಿ ರೋಡು ತಾಲೂಕು ಆಡಳಿತ ಸೌಧದ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಿ, ಪ್ರಬಲವಾಗಿ ಖಂಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಜ್ಯ ರೈತ ಸಂಘ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿ ಕಂಬಳಗುತ್ತು, ಶ್ರೀಧರ ಶೆಟ್ಟಿ ಬೈಲುಗುತ್ತು, ಜಿಲ್ಲಾ ಗೌರವಾಧ್ಯಕ್ಷ ದನ ಕೀರ್ತಿ ಬಲಿಪ, ಜಿಲ್ಲಾ ಕಾನೂನು ಸಲಹೆಗಾರ ನ್ಯಾಯವಾದಿ ಎಸ್ಪಿ ಚಂಗಪ್ಪ, ಬಂಟ್ವಾಳ ತಾಲೂಕು ರೈತ ಸಂಘ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್, ಮಂಗಳೂರು ತಾಲೂಕು ಅಧ್ಯಕ್ಷ ದಯಾನಂದ ಶೆಟ್ಟಿ, ಬಂಟ್ವಾಳ ತಾಲೂಕು ಗೌರವಾಧ್ಯಕ್ಷ ಮುರುವ ಮಹಾಬಲ ಬಟ್, ತುಳುನಾಡು ಪಂಚಾಯಿತಿ ವೇದಿಕೆ ಅಧ್ಯಕ್ಷ ರೋಷನ್ ಲೋಬೋ, ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಮಾಜಿ ಸಚಿವ ಬಿ ರಮನಾಥ ರೈ ಮೊದಲಾದವರು ಮಾತನಾಡಿದರು.
ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಹಾಗೂ ಎಸಿ ಅವರು ಸರಕಾರಕ್ಕೆ ಈ ಬಗ್ಗೆ ಪರ್ಯಾಯ ವ್ಯವಸ್ಥೆಯನ್ನು ಮಾಡುವ ಬಗ್ಗೆ ಲಿಖಿತ ವರದಿ ಸಲ್ಲಿಸಿ ವಾರದೊಳಗೆ ಯಥಾ ಪ್ರತಿಯನ್ನು ರೈತರಿಗೆ ನೀಡುವುದಾಗಿ ಭರವಸೆ ನೀಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕೆಂದು ರೈತರು ರಸ್ತೆ ತಡೆಯನ್ನು ಕೈಗೊಂಡರು.