ಕರ ಸೇವಕರ ಬಲಿದಾನ ಹೋರಾಟದ ಫಲವಾಗಿ ಅಯೋಧ್ಯೆ ಮರಳಿ ಪಡೆಯುವಂತಾಗಿದೆ-ಡಾ| ಭಟ್…..

ಬಂಟ್ವಾಳ: ಕರ ಸೇವಕರ ಬಲಿದಾನ ಹೋರಾಟದ ಫಲವಾಗಿ ಹಿಂದೂಗಳ ಶ್ರದ್ಧಾ ಕೇಂದ್ರ ಅಯೋಧ್ಯೆಯನ್ನು ಮರಳಿ ಪಡೆಯುವಂತಾಗಿದೆ. ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಹಿಂದೂ ರಾಷ್ಟ್ರ ನಿರ್ಮಾಣದ ಒಂದು ಹೆಜ್ಜೆಯಾಗಿದೆ. ಹಿಂದುಗಳು ನಿಜವಾದ ಜಾತ್ಯತೀತರು ಎಂದು ರಾಷ್ಟ್ರೀಯ ಸ್ವಯಂ ಸಂಘದ ದಕ್ಷಿಣ ಕ್ಷೇತ್ರಿಯ ಪ್ರಮುಖ್ ಡಾ. ಪ್ರಭಾಕರ ಭಟ್ ಹೇಳಿದರು.
ಅವರು ಡಿ. 6ರಂದು ಕಲ್ಲಡ್ಕ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಆಶ್ರಯದಲ್ಲಿ ಏರ್ಪಡಿಸಿದ್ದ ಅಯೋಧ್ಯಾ ಕರಸೇವಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅಯೋಧ್ಯೆಗಾಗಿ ಐನೂರು ವರ್ಷಗಳಿಂದ ಹೋರಾಟ ನಡೆದಿದೆ. ಎಪ್ಪತೈದು ಸಲ ಯುದ್ಧ ನಡೆದಿದೆ. ಅಯೋಧ್ಯೆ 2.77 ಎಕ್ರೆ ಭೂಮಿಗಾಗಿ ನಡೆದದ್ದಲ್ಲ. 1990-92 ರಲ್ಲಿ ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಹಾಗೂ ಶ್ರೀರಾಮ ಮಂದಿರ ನಿರ್ಮಾಣದ ಹೋರಾಟ ಎರಡು ಹಂತದಲ್ಲಿ ನಡೆದಿತ್ತು. ಸಹಸ್ರಾರು ಕರಸೇವಕರು ಸ್ವಂತದನ್ನು ಮರೆತು ಅಯೋಧ್ಯೆಗೆ ತೆರಳಿದ್ದರು. ಮೊದಲ ಹಂತದಲ್ಲಿ ಮುಲಾಯಂ ಸರಕಾರ ಕರಸೇವಕರನ್ನು ಬಂಧಿಸುವ ಮೂಲಕ ತಡೆ ಒಡ್ಡಿ ಹಿಂಸೆ ನೀಡಿತ್ತು. ಎರಡನೇ ಹಂತದಲ್ಲಿ ಕಲ್ಯಾಣ್ ಸಿಂಗ್ ಸರಕಾರದ ಅವಧಿಯಲ್ಲಿ ಕರಸೇವಕರು ಅಪಮಾನದ ಕಟ್ಟಡವನ್ನು ಧ್ವಂಸಗೊಳಿಸಿದರು. ತಾತ್ಕಾಲಿಕ ಮಂದಿರ ನಿರ್ಮಿಸಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು ನ್ಯಾಯಾಲಯ ತೀರ್ಪು ನೀಡುವುದಕ್ಕೆ ಸಹಕಾರಿಯಾಯಿತು ಎಂದು ತಿಳಿಸಿದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ಕರಸೇವಕರು ಧಾರ್ಮಿಕ ಶ್ರದ್ಧಾಬಿಂದುವಿಗಾಗಿ ಹಲವರು ಪ್ರಾಣಾರ್ಪಣೆ ಮಾಡಿದ್ದಾರೆ. ನ್ಯಾಯಾಲಯದ ತೀರ್ಪು ಸರ್ವಾನುಮತದ್ದಾಗಿದೆ. ಅಯೋಧ್ಯೆ ಹಿಂದುಗಳ ಶ್ರದ್ಧಾಕೇಂದ್ರ, ಶ್ರೀರಾಮನೇ ಆದರ್ಶ ಪುರುಷೋತ್ತಮ ಎಂದರು.
ವೇದಿಕೆಯಲ್ಲಿ ವಿಹಿಂಪ ವಿಟ್ಲ ತಾಲೂಕು ಅಧ್ಯಕ್ಷ ಕ. ಕೃಷ್ಣಪ್ಪ, ಹಿಂಜಾವೇ ಜಿಲ್ಲಾ ಸಂಚಾಲಕ ರತ್ಮಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
1990 ಅ. 10ರಂದು ಅಯೋಧ್ಯೆ ಕರಸೇವೆಗೆ ಹೋದವರಿಗೆ ಡಾ| ಕಲ್ಲಡ್ಕ ಪ್ರಭಾಕರ ಭಟ್ ಬರೆದ ಪೋಸ್ಟ್ ಕಾರ್ಡ್ ಪತ್ರವನ್ನು ಅಯೋಧ್ಯೆ ಕರಸೇವೆಗೆ ಹೋಗಿದ್ದ ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಸಭೆಯಲ್ಲಿ ಓದಿ ಹೇಳಿದರು. ಕರಸೇವಕರಾಗಿ ಅಯೋಧ್ಯೆಗೆ ಹೋಗಿದ್ದ ಸುಬ್ರಹ್ಮಣ್ಯ ಭಟ್ ಕೆದಿಲ,ಸರಪಾಡಿ ಅಶೋಕ ಶೆಟ್ಟಿ ತಮ್ಮ ಅನುಭವವನ್ನು ಹಂಚಿಕೊಂಡರು.
ಹಿಂಜಾವೇ ಪ್ರಮುಖ ರಾಧಾಕೃಷ್ಣ ಅಡ್ಯಂತಾಯ ಪ್ರಾಸ್ತಾವಿಕ ಮಾತನಾಡಿ ಕರಸೇವಕರ ಹೋರಾಟದ ಫಲವಾಗಿ ಇಂದು ಪ್ರಭು ಶ್ರೀರಾಮಚಂದ್ರನ ಜನ್ಮ ಭೂಮಿ ಅಯೋಧ್ಯೆಯು ಹಿಂದುಗಳಿಗೆ ಸಿಗುವಂತಾಗಿದೆ. ಆದರೂ ಜಿಲ್ಲೆಯಲ್ಲಿ ಇಂದು ನಿಷೇದಾಜ್ಞೆ ಜಾರಿಗೊಳಿಸಿರುವುದಲ್ಲದೆ , ಪೊಲೀಸರು ಕಾರ್ಯಕ್ರಮ ತಡೆಯುವ ಯತ್ನ ಮಾಡಿದ್ದಾರೆ. ಆಡಳಿತ ವ್ಯವಸ್ಥೆ ಬದಲಾಗಿದ್ದರೂ ಇನ್ನೂ ಹಿಂದು ವಿರೋಧಿ ಮಾನಸಿಕತೆ ಬದಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ 9 ಮಂದಿ ಮಹಿಳೆಯರ ಸಹಿತ 110 ಮಂದಿ ಕರಸೇವಕರನ್ನು ಕೇಸರಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಿ ರಾಜಶೇಖರಾನಂದ ಸ್ವಾಮೀಜಿ ಆಶೀರ್ವದಿಸಿದರು. ಕರಸೇವಕರಾಗಿ ಭಾಗವಹಿಸಿದ ಪ್ರಮುಖರಾದ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಎ. ರುಕ್ಮಯ ಪೂಜಾರಿ, ರವೀಂದ್ರ ಕಂಬಳಿ, ಚೆನ್ನಪ್ಪ ಕೋಟ್ಯಾನ್, ಬಿ.ಟಿ. ನಾರಾಯಣ ಭಟ್, ಸುಗುಣಾ ಕಿಣಿ, ನಾರಾಯಣ ಶೆಟ್ಟಿ ಕೊಂಬಿಲ, ಸುಂದರ ಭಂಡಾರಿ ರಾಯಿ, ನಾರಾಯಣ ಸಪಲ್ಯ ಕಡೇಶ್ವಾಲ್ಯ, ಡೊಂಬಯ ಟೈಲರ್, ತನಿಯಪ್ಪ ಗೌಡ ವಿಟ್ಲಮುಡ್ನೂರು, ಯಶವಂತ ಪ್ರಭು ನೇರಳಕಟ್ಟೆ ಸಹಿತ ಇತರ ಪ್ರಮುಖರು ಪಾಲ್ಗೊಂಡಿದ್ದರು.

ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಅಧ್ಯಕ್ಷ ನರಸಿಂಹ ಶೆಟ್ಟಿ ಮಾಣಿ ಸ್ವಾಗತಿಸಿ, ಹಿಂಜಾವೇ ಸಂಘಟನಾ ಕಾರ್ಯದರ್ಶಿ ಮನೋಜ್ ಪೆರ್ನೆ ವಂದಿಸಿದರು.ವಿಭಾಗ ಸಂಯೋಜಕ ಗಣರಾಜ ಭಟ್ ಕೆದಿಲ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button