ಪುತ್ತೂರು ರೋಟರಿಯಿಂದ `ವಾಲ್ ಆಫ್ ಹುಮ್ಯಾನಿಟಿ’ ನೂತನ ಯೋಜನೆ ಜಾರಿ….
ಪುತ್ತೂರು: ಆವಶ್ಯಕತೆ ಇರುವ ಅಸಹಾಯಕರಿಗೆ ನೆರವಾಗುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ `ರೋಟರಿ ವಾಲ್ ಆಫ್’ ಹುಮ್ಯಾನಿಟಿ ಎಂಬ ಹೊಸ ಯೋಜನೆಯನ್ನು ಪುತ್ತೂರಿನಲ್ಲಿ ಜಾರಿಗೊಳಿಸಲಾಗುತ್ತಿದ್ದು, ಸೆ. 8 ರಂದು ರೋಟರಿ ಕ್ಲಬ್ 3181 ಜಿಲ್ಲೆಯ ಗವರ್ನರ್ ಜೋಸೆಫ್ ಮ್ಯಾಥ್ಯೂ ನೂತನ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಸಂತೋಷ್ ಶೆಟ್ಟಿ ಸಾಜ ತಿಳಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಯೋಜನೆಯಂತೆ ಸಾರ್ವಜನಿಕರು ತಮ್ಮಲ್ಲಿ ಹೆಚ್ಚುವರಿಯಾಗಿರುವ ಹಾಗೂ ಉಪಯೋಗಿಸದೇ ಉತ್ತಮ ಸ್ಥಿತಿಯಲ್ಲಿರುವ ಇರುವ ದಿನಬಳಕೆಯ ವಸ್ತುಗಳನ್ನು ರೋಟರಿ ವಾಲ್ ಆಫ್ ಹುಮ್ಯಾನಿಟಿಗೆ ತಲುಪಿಸಬಹುದು. ಅದನ್ನು ಯಾರಿಗೆ ಆವಶ್ಯಕತೆ ಇದೆಯೋ ಅವರು ಅಲ್ಲಿಂದ ಪಡೆದುಕೊಳ್ಳಬಹುದು. ಮುಂದೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಕಲೆಕ್ಷನ್ ಸೆಂಟರ್ ಆಗಿಯೂ ಅದನ್ನು ಬಳಸಲು ಯೋಜನೆ ಹಾಕಿಕೊಳ್ಳಲಾಗಿದೆ. ನಗರದ ಆಶ್ಮಿ ಕಂಫರ್ಟ್ ಬಿಲ್ಡಿಂಗ್‍ನಲ್ಲಿ ಇದಕ್ಕಾಗಿ ಕೇಂದ್ರವನ್ನು ತೆರೆದು ಕಪಾಟುಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ತಮ್ಮಲ್ಲಿ ಹೆಚ್ಚುವರಿ ಇರುವ ವಸ್ತ್ರಗಳು, ಶಾಲಾ ಸಮವಸ್ತ್ರಗಳು, ಸ್ಕೂಲ್ ಬ್ಯಾಗ್, ಸ್ಕೂಲ್ ಶೂಸ್, ಉಪಯೋಗಿಸಲ್ಪಡದ ಚಪ್ಪಲಿ, ಪುಸ್ತಕಗಳು, ಸ್ಟೇಷನರಿ ಸಾಮಾಗ್ರಿಗಳು, ಪಾತ್ರೆ ಸಾಮಾಗ್ರಿಗಳು, ಉಪಯೋಗಕ್ಕೆ ಅರ್ಹವಾದ ಔಷಧಿಗಳನ್ನು ನೀಡಬಹುದು. ಬಳಸಲು ಯೋಗ್ಯವಾದ ಫರ್ನಿಚರ್ ಗಳನ್ನೂ ನೀಡಬಹುದು.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ 3181 ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ, ಕಾರ್ಯದರ್ಶಿ ಮೊಹಮ್ಮದ್ ರಫೀಕ್ ದರ್ಬೆ, ನಿಯೋಜಿತ ಅಧ್ಯಕ್ಷ ವೆಂಕಟ್‍ರಾಜ್, ಕೋಶಾಧಿಕಾರಿ ಸನತ್ ಕುಮಾರ್ ರೈ ಉಪಸ್ಥಿತರಿದ್ದರು.