ಕ್ಯಾನ್ಸರ್ ನಿಂದ ಬಳಲುತ್ತಿದ್ದು ಎಷ್ಟು ದಿನ ಬದುಕಿರುತ್ತೇನೆ ಎಂಬುದು ಗೊತ್ತಿಲ್ಲ -ಮುತ್ತಪ್ಪ ರೈ…..
ಮಂಗಳೂರು: ‘ಯಾವಾಗಲೋ ನನ್ನ ಟಿಕೆಟ್ ಬುಕ್ ಆಗಿದ್ದು ,ಓಕೆ ಆಗಿಲ್ಲ ಅಷ್ಟೆ. ನಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಎಷ್ಟು ದಿನ ಬದುಕಿರುತ್ತೇನೆ ಎಂಬುದು ಗೊತ್ತಿಲ್ಲ . ಆದರೆ ಬದುಕಿದ್ದಷ್ಟು ದಿನವೂ ಜನರ ಸೇವೆ ಮಾಡಿಕೊಂಡಿರುತ್ತೇನೆ’ ಎಂದು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ನಿನ್ನೆ ಹೇಳಿದ್ದಾರೆ.
ಒಂದು ಕಾಲದಲ್ಲಿ ಭೂಗತ ದೊರೆಯಾಗಿ ಮೆರೆದಿದ್ದ ಮುತ್ತಪ್ಪ ರೈ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಳೆಯ ಬದುಕಿಗೆ ವಿದಾಯ ಹೇಳಿ ಹೊಸ ಮನುಷ್ಯನಾಗಿ ಬದುಕುತ್ತಿದ್ದರು. ಆದರೆ ಇತ್ತೀಚೆಗೆ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮುತ್ತಪ್ಪ ರೈ ಸಾರ್ವಜನಿಕ ಜೀವನದಿಂದ ಮರೆಯಾಗಿದ್ದರು. ಆದರೆ ನಿನ್ನೆ ಮುತ್ತಪ್ಪ ರೈ ದಿಢೀರ್ ಸುದ್ದಿಗೋಷ್ಠಿಯನ್ನು ನಡೆಸಿ ಹಲವು ವಿಚಾರಗಳು ಹಂಚಿಕೊಂಡಿದ್ದಾರೆ.ಅಮೆರಿಕದ ಆಸ್ಪತ್ರೆಯಲ್ಲಿ ತಲಾ ಏಳು ಕೋಟಿ ರೂಪಾಯಿ ಮೊತ್ತದ ಎರಡು ಇಂಜೆಕ್ಷನ್ ಪಡೆದಿದ್ದರೆ ನನ್ನ ಕ್ಯಾನ್ಸರ್ ವಾಸಿಯಾಗುತ್ತದೆ ಎಂದು ದೆಹಲಿ ವೈದ್ಯರು ಸಲಹೆ ನೀಡಿದ್ದರು. 68 ವರ್ಷದ ನಾನು ಅಷ್ಟು ಹಣ ಖರ್ಚು ಮಾಡಿ ಬದುಕುವ ಬದಲು ಆ ಹಣವನ್ನು ಬಡವರಿಗೆ ನೀಡಲು ಮುಂದಾಗಿದ್ದೇನೆ ಎಂದು ರೈ ಹೇಳಿದ್ದಾರೆ.
ನಾನು ಪ್ರತಿಯೊಂದು ವಹಿವಾಟಿನಲ್ಲಿಯೂ ಪಾರದರ್ಶಕವಾಗಿದ್ದೇನೆ. ವರ್ಷಕ್ಕೆ 25 ರಿಂದ 30 ಕೋಟಿಯಷ್ಟು ತೆರಿಗೆ ಪಾವತಿಸುತ್ತಿದ್ದೇನೆ. ಯಾರಿಗೂ ಮೋಸ ಮಾಡಿಲ್ಲ. ನನ್ನ ಪತ್ನಿ, ಮಕ್ಕಳು, ಮೊಮ್ಮಕ್ಕಳು ಹಾಗೂ ಸಂಬಂಧಿಕರಿಗೆ ಏನೇನು ಸಲ್ಲಬೇಕೋ ಅದನ್ನೆಲ್ಲಾ ವಿಲ್ ನಲ್ಲಿ ಬರೆಸಿದ್ದೇನೆ. ಕಳೆದ 20 ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡುತ್ತಿರುವವರಿಗೆ ನಿವೇಶನ ಕೊಡಲು ನಿರ್ಧರಿಸಿದ್ದೇನೆ. ನನ್ನೊಂದಿಗೆ ಜಯಕರ್ನಾಟಕ ಸಂಘಟನೆ ಅಂತ್ಯಗೊಳ್ಳಬಾರದು ಎನ್ನುವ ಕಾರಣಕ್ಕಾಗಿ ಜಗದೀಶ್ ರಾಜ್ ರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೇನೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆರೋಗ್ಯ ವಿಮೆ ಮಾಡಿಸಲು ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸುತ್ತೇವೆ ಎಂದು ಮುತ್ತಪ್ಪ ರೈ ಹೇಳಿದ್ದಾರೆ.