ಜನ್ಮದಿಂದ ಯಾರೂ ಮಹಾತ್ಮರಲ್ಲ ತನ್ನ ಕರ್ಮದಿಂದ ಮಹಾತ್ಮರಾಗುತ್ತಾರೆ-ಬಾಬಾ ರಾಮದೇವ್….
ಬಂಟ್ವಾಳ : ಜನ್ಮದಿಂದ ಯಾರೂ ಮಹಾತ್ಮರಲ್ಲ ತನ್ನ ಕರ್ಮದಿಂದ ಮಹಾತ್ಮರಾಗುತ್ತಾರೆ.ಮಾತೃ ಭಾಷೆಯಲ್ಲಿ ಕಲಿಯುವುದರಿಂದ ನಮ್ಮ ಮಿದುಳಿನ ಸಾಮರ್ಥ್ಯ ಹೆಚ್ಚುತ್ತದೆ. ಸಂಸ್ಕೃತ ಭಾಷೆಯ ಅಭ್ಯಾಸದಿಂದ ನಾವು ಸಂಸ್ಕಾರವಂತರಾಗುತ್ತೇವೆ. ತಪಸ್ಸು, ಧೈರ್ಯ ಸಾಹಸವನ್ನು ಜೀವನದಲ್ಲಿ ಬೆಳೆಸಿಕೊಂಡು ಶ್ರೇಷ್ಟ ಕಾರ್ಯಗಳನ್ನು ಮಾಡಿರಿ ಎಂದು ಪತಂಜಲಿ ಯೋಗಗುರು ಬಾಬಾ ರಾಮದೇವ್ ಹೇಳಿದರು.
ಅವರು ನ. 20ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ಶಾಲಾ ಪರಿಸರ ವೀಕ್ಷಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಗುರುಕುಲ ಮಾದರಿ ಶಿಕ್ಷಣ ನೀಡುತ್ತಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಕಂಡು ಸಂತಸ ಆಯಿತು. ಇಲ್ಲಿ ಉತ್ತಮ ಶಿಸ್ತಿನ ಶಿಕ್ಷಣ ಸಿಗುವುದು ನನಗೆ ಮೆಚ್ಚುಗೆ ಆಗಿದೆ. ಪರಸ್ಪರರನ್ನು ಕಂಡಾಗ ಜೈಶ್ರೀರಾಮ್ ಹೇಳುವ ಶಾಲೆಯನ್ನು ಕಲ್ಲಡ್ಕ ಹೊರತು ಎಲ್ಲಿಯೂ ನಾನು ನೋಡಿಲ್ಲ. ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಸಂಭಾಷಣೆ ಮಾಡಿದ್ದಾರೆ. ಡಾ. ಪ್ರಭಾಕರ ಭಟ್ ಶ್ವೇತವಸ್ತ್ರದ ಸನ್ಯಾಸಿ, ಋಷಿ ಸದೃಶ ಜೀವನ ಮಾಡುತ್ತಿದ್ದಾರೆ ಎಂದರು.
ಅಕರ್ಮಗಳನ್ನು ಮಾಡುವುದು ರಾಕ್ಷಸರು. ಸಕರ್ಮ ಮಾಡುವ ಮಾನವ ದೇವರಾಗುತ್ತಾನೆ. ಸತ್ಯ ಮತ್ತು ನ್ಯಾಯ ಮಾರ್ಗದ ಮೂಲಕ ಮುನ್ನಡೆದು ಭಗವಾನ್ ಶ್ರೀರಾಮನ ಮಾರ್ಗದಲ್ಲಿ ಮುನ್ನಡೆಯಬೇಕು. ಕರ್ಮವೇ ಶ್ರೇಷ್ಠ ಧರ್ಮ. ದೇಶ ಮತ್ತು ಸ್ವಧರ್ಮವನ್ನು ನಾವೆಲ್ಲ ರಕ್ಷಿಸಬೇಕು. ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ಇರಲಿ ಎಂದು ಕರೆ ನೀಡಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಗೋಪೂಜೆ, ವಿದ್ಯಾರ್ಥಿಗಳ ಮಲ್ಲಕಂಭ ಪ್ರದರ್ಶನ, ಶಿಶುಮಂದಿರ, ಪ್ರಾಥಮಿಕ ವಿಭಾಗ ವೀಕ್ಷಣೆ ಮಾಡಿದರು.
ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್, ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಯನ್. ಪತಂಜಲಿ ಯೋಗ ಟ್ರಸ್ಟ್ ನ ರಾಜ್ಯ ಉಸ್ತುವಾರಿ ಭವರ್‍ಲಾಲ್ ಆರ್ಯ, ಮಂಗಳೂರು ಜಿಲ್ಲಾ ಉಸ್ತುವಾರಿ ರಾಜೇಂದ್ರ ಆಚಾರ್ಯ ಉಡುಪಿ, ಸುಜಾತ ಮಂಗಳೂರು, ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕ್ಷಮಾ, ಜೆನಿತ್, ಅಮೃತ ವಿವಿಧ ಪ್ರಶ್ನೆಗಳನ್ನು ಮಾಡಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಯಾಜಿ ಫಲಪುಷ್ಪ ಸಮರ್ಪಿಸಿ ಸ್ವಾಗತಿಸಿದರು., ಪದವಿ ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.