ಜಿಲ್ಲಾಮಟ್ಟದ ಸ್ವಚ್ಚತಾ ಜಾಗೃತಿ ಬೀದಿನಾಟಕಕ್ಕೆ ಚಾಲನೆ…..
ಪುತ್ತೂರು : ತ್ಯಾಜ್ಯ ನಿರ್ವಹಣೆಯ ಕಾರ್ಯವನ್ನು ಸ್ವಯಂ ಪ್ರೇರಿತರಾಗಿ ನಾವಾಗಿಯೇ ಒಳ್ಳೆಯ ರೀತಿಯಲ್ಲಿ ಮಾಡಿದರೆ ಸಮಸ್ಯೆ ಅಷ್ಟೊಂದು ದೊಡ್ಡದಾಗಿ ಬೆಳೆಯಲು ಸಾಧ್ಯವಿಲ್ಲ. ಆದರೆ ಸ್ವಚ್ಚತೆಯ ಬಗ್ಗೆ ಎಲ್ಲಾ ಕಡೆಗಳಲ್ಲಿ ಮಾತನಾಡುತ್ತಿದ್ದರೂ, ಈ ಕೆಲಸ ಎಲ್ಲೂ ಪಾಲನೆಯಾಗುತ್ತಿಲ್ಲ. ತ್ಯಾಜ್ಯ ನಿರ್ವಹಣೆಯ ಕಾರ್ಯಫಲದಾಯಕವಾಗದಿರಲು ನಾವೇ ಕಾರಣರಾಗಿದ್ದು, ದ.ಕ.ಜಿಲ್ಲೆಯನ್ನು ತ್ಯಾಜ್ಯಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷೆ ಶಾಂತಿಗೋಡು ಹೇಳಿದರು.
ಅವರು ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಮಾವಿನಕಟ್ಟೆ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತೆ ಮತ್ತು ತ್ಯಾಜ್ಯ ನಿರ್ವಹಣೆಯ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ `ಬೀದಿನಾಟಕ’ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್ ಮಾತನಾಡಿ ಯಕ್ಷಗಾನ ಮತ್ತು ನಾಟಕ ಗ್ರಾಮೀಣ ಪ್ರದೇಶದ ಜನತೆಯ ಮನ ತಲುಪಿಸುವ ಅತ್ಯಂತ ಸೂಕ್ತ ವ್ಯವಸ್ಥೆಯಾಗಿದ್ದು, ಬೀದಿ ನಾಟಕದ ಮೂಲಕ ಸ್ವಚ್ಚತೆಯ ಹಾಗೂ ತ್ಯಾಜ್ಯ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸುವ ಕೆಲಸವಾದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲುದು ಎಂದರು.
ತಾಲೂಕು ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಆರ್ಯಾಪು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಸಂತ ಶ್ರೀದುರ್ಗಾ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯೆ ಕುಸುಮಾ,ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ, ಆರ್ಯಾಪು ಗ್ರಾಮ ಪಂಚಾಯತ್ ಕಾರ್ಯದರ್ಶಿ ಅನುಷಾ, ಪಿಂಗಾರ ಕಲಾ ತಂಡದ ನಾಯಕ ಪ್ರತಾಪ್ ಚೆಂಡೆತ್ತಿಮಾರ್,ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ವತ್ಸಲಾ ನಾಯಕ್ ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಯಾಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ ಪ್ರಕಾಶ್ ಸ್ವಾಗತಿಸಿದರು. ಪಿಂಗಾರ ಕಲಾತಂಡ ನಾಗರಾಜ್ ಬಜಾಲ್ ವಂದಿಸಿದರು. ಶಿಕ್ಷಕ ಜಗದೀಶ್ ಶೆಟ್ಟಿ ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಪಿಂಗಾರ ಕಲಾ ತಂಡದಿಂದ ಸ್ವಚ್ಚತೆ ಮತ್ತು ತ್ಯಾಜ್ಯ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನಗೊಂಡಿತು