ಜಿಲ್ಲೆಯಲ್ಲಿ ಆರ್ಥಿಕ ಗಣತಿ ಪ್ರಾರಂಭ- ನಿಖರ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ…

ಮಂಗಳೂರು: ಜಿಲ್ಲೆಯಲ್ಲಿ ಜ.1ರಿಂದ 7 ನೇ ಆರ್ಥಿಕ ಗಣತಿ ಆರಂಭವಾಗಿದ್ದು, ಮೂರು ತಿಂಗಳುಗಳ ಕಾಲ ಜಿಲ್ಲೆಯಾದ್ಯಂತ ನಡೆಯಲಿರುವ ಗಣತಿಯಲ್ಲಿ ಸಂಘಟಿತ ಹಾಗೂ ಅಸಂಘಟಿತ ಆರ್ಥಿಕ ವಲಯಗಳ ಬಗ್ಗೆ ಮಾಹಿತಿಯನ್ನು ಗಣತಿದಾರರು ಸಂಗ್ರಹಿಸಲಿದ್ದಾರೆ. ಸಾರ್ವಜನಿಕರು ಗಣತಿದಾರರಿಗೆ ನಿಖರವಾದ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರ್ಥಿಕ ಗಣತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತೀ 5 ವರ್ಷಕೊಮ್ಮೆ ಈ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಆರ್ಥಿಕ ಗಣತಿಯಲ್ಲಿ ನಗರ ಮತ್ತು ಗ್ರಾಮೀಣ ಸೇರಿದಂತೆ ಜಿಲ್ಲೆಯ ಭೌಗೋಳಿಕ ಗಡಿಯೊಳಗೆ ನೆಲೆಗೊಂಡಿರುವ ಎಲ್ಲಾ ಉದ್ದಿಮೆಗಳ/ಘಟಕಗಳಲ್ಲಿ ಜರುಗುತ್ತಿರುವ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವರ ಸಂಗ್ರಹಿಸಲಾಗುತ್ತದೆ. ಗಣತಿಯಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಯೋಜನೆಗಳನ್ನು ರೂಪಿಸುವ ಉದ್ದೇಶಕ್ಕೆ ಮತ್ತು ವಿವಿಧ ವಲಯಗಳಿಂದ ಆರ್ಥಿಕತೆಗೆ ದೊರಕುವ ಕೊಡುಗೆಗಳನ್ನು ಅಂದಾಜಿಸಲು ಉಪಯೋಗಿಸಲಾಗುವುದೆಂದು ಹೇಳಿದರು. ಇದೇ ಮೊದಲ ಬಾರಿಗೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಕಾರ್ಮಿಕ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಉದ್ಯಮಿಗಳಿಗೆ ಮತ್ತು ವಾಣಿಜ್ಯ ಘಟಕಗಳಿಗೆ ಗಣತಿಕಾರ್ಯದಲ್ಲಿ ಸಹಕರಿಸುವಂತೆ ನಿರ್ದೇಶನ ನೀಡುವುದರ ಜೊತೆಗೆ ನಿಖರವಾದ ಮಾಹಿತಿ ಸಂಗ್ರಹಣೆಯಾಗುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ.ಉದಯ ಶೆಟ್ಟಿ, ಸಹಾಯಕ ನಿರ್ದೇಶಕ ಮನ್‍ಮೋಹನ್, ಸಹಾಯಕ ಸಾಂಖ್ಯಿಕ ಅಧಿಕಾರಿ ಎ.ಡಿ ಬೋಪಯ್ಯ, ಜಿಲ್ಲಾ ವ್ಯವಸ್ಥಾಪಕರು ಸಿಎಸ್‍ಸಿ ಇ ಗವರ್ನೆನ್ಸ್ ಸರ್ವಿಸ್ ಇಂಡಿಯಾ ಲಿಮಿಟೆಡ್ ಶವಿನ್ ಬಿ.ಎಸ್, ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಸೇವಾ ಸಿಂಧು ಅಕ್ಷತಾ ಕೆ.ಎನ್, ಜಿಲ್ಲಾ ವ್ಯವಸ್ಥಾಪಕರು ಸಿಎಸ್‍ಸಿ ಇ ಗವರ್ನೆನ್ಸ್ ಸರ್ವಿಸ್ ಇಂಡಿಯಾ ಲಿಮಿಟೆಡ್ ಪ್ರಶಾಂತ್ ಕೆ.ಬಿ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button