ದುಬಾರಿ ವಿದ್ಯುತ್ ಬಿಲ್ – ವಿದ್ಯುತ್ ಸರಬರಾಜು ಮಂಡಳಿಗಳಿಂದ ಹಗಲು ದರೋಡೆ???…
ಸುಳ್ಯ: ಕೊರೋನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಇದೀಗ ವಿದ್ಯುತ್ ಸರಬರಾಜು ಮಂಡಳಿಗಳು ಮತ್ತೊಂದು ಶಾಕ್ ನೀಡಿವೆ. ಈ ತಿಂಗಳು ನೀಡಿರುವ ವಿದ್ಯುತ್ ಬಿಲ್ ಗಮನಿಸಿದರೆ, ವಿದ್ಯುತ್ ಸರಬರಾಜು ಮಂಡಳಿಗಳು ಹಗಲು ದರೋಡೆಗಿಳಿದಿರುವುದು ಸ್ಪಷ್ಟವಾಗುತ್ತದೆ.
ಲಾಕ್ ಡೌನ್ ನಿಂದಾಗಿ ಮಂಡಳಿಗಳು ಮಾರ್ಚ್ ತಿಂಗಳ ವಿದ್ಯುತ್ ಬಿಲ್ ಕೊಟ್ಟಿರಲಿಲ್ಲ. ಮೇ ತಿಂಗಳಲ್ಲಿ ಎರಡು ತಿಂಗಳುಗಳ ಅಂದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳ ಬಿಲ್ ನ್ನು ಒಟ್ಟಿಗೆ ಕೊಡಲಾಗಿದೆ. ಇದೀಗ ಮಂಡಳಿಗಳು ಬಿಲ್ ಕೊಡದೆ ಇರುವುದಕ್ಕೆ ಗ್ರಾಹಕರನ್ನು ಮೂರ್ಖರನ್ನಾಗಿಸಲಾಗಿದೆ.
ಎರಡು ತಿಂಗಳ ಮೀಟರ್ ರೀಡಿಂಗ್ ಇದೀಗ ಒಟ್ಟಿಗೆ ಮಾಡಿ, ಬರುವ ಯೂನಿಟ್ ಮೇಲೆ ಸ್ಲ್ಯಾಬ್, ಶುಲ್ಕ ನಿಗದಿ ಮಾಡಲಾಗಿದೆ.
ಎರಡು ತಿಂಗಳ ಮೀಟರ್ ರೀಡಿಂಗ್ ಒಟ್ಟಿಗೆ ಮಾಡಿದುದರಿಂದ ಉಪಯೋಗಿಸಿದ ವಿದ್ಯುತ್ ಯೂನಿಟ್ ಗಳ ಸಂಖ್ಯೆ ಹೆಚ್ಚಾಗಿದೆ. ಮಾತ್ರವಲ್ಲದೆ ಅವೈಜ್ಞಾನಿಕವಾಗಿ ಯೂನಿಟ್ ಮೇಲೆ ಸ್ಲ್ಯಾಬ್, ಶುಲ್ಕ ನಿಗದಿ ಮಾಡಿ – ಬಿಲ್ ನೀಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಯತ್ನ ಇದಾಗಿದೆ.
ಮಾರ್ಚ್ ನಲ್ಲಿ ಮೀಟರ್ ರೀಡಿಂಗ್ ಮಾಡದೆ ಇರುವುದಕ್ಕೆ ಅಥವಾ ಮೀಟರ್ ರೀಡಿಂಗ್ – ಬಿಲ್ಲಿಂಗ್ ತಂತ್ರಾಂಶ ದ (software) ಸಮಸ್ಯೆಗಳಿಗೆ ಗ್ರಾಹಕರು ಹೇಗೆ ಜವಾಬ್ದಾರರಾಗುತ್ತಾರೆ?. ಬೆಂಗಳೂರು ಸೇರಿದಂತೆ ರಾಜ್ಯದ ಹೆಚ್ಚಿನ ಎಲ್ಲ ಕಡೆ ಇದೆ ಸಮಸ್ಯೆ ಇದೆ ಎಂದು ತಿಳಿದು ಬಂದಿದೆ.
ವಿದ್ಯುತ್ ಬಿಲ್ಲಿಂಗ್ ನಲ್ಲಿ ಗೊತ್ತಿಲ್ಲದೇ ಈ ಸಮಸ್ಯೆಯಾಗಿದ್ದರೆ,ಮಂಡಳಿಗಳು ಕೂಡಲೇ ತಮ್ಮ ಗ್ರಾಹಕರಿಗೆ ಸರಿಪಡಿಸಿದ ಬಿಲ್ ನೀಡಬೇಕಾಗಿದೆ. ಇಲ್ಲದೆ ಹೋದಲ್ಲಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.