5ನೇ ಬೃಹತ್ ಕೃಷಿಯಂತ್ರ ಮೇಳ – ಜಾಗೃತಿ ಜಾಥಾ…

ಪುತ್ತೂರು: ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಸಂಬ್ರಮಕ್ಕೆ ಚಾಲನೆ ನೀಡಲು ಕೇಂದ್ರ ಗೃಹ ಖಾತೆಯ ಸಚಿವರು ಹಾಗೂ ಸಹಕಾರಿ ಸಚಿವರೂ ಆದ ಸನ್ಮಾನ್ಯ ಅಮಿತ್ ಶಾ ಅವರು ಪುತ್ತೂರಿಗೆ ಆಗಮಿಸುತ್ತಾರೆ.
ಅಲ್ಲದೆ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ), ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಪುತ್ತೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆವರಣದಲ್ಲಿ ಫೆ. 10 ಶುಕ್ರವಾರದಿಂದ ಫೆ. 12 ಆದಿತ್ಯವಾರದವರೆಗೆ 3 ದಿನಗಳ ಕಾಲ ನಡೆಯಲಿರುವ 5ನೇ ಬೃಹತ್ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನವೂ ನಡೆಯಲಿದೆ.
ಇವೆರಡೂ ಕಾರ್ಯಕ್ರಮಗಳ ಬಗ್ಗೆ ರೈತಾಪಿ ವರ್ಗಕ್ಕೆ ಮತ್ತು ಜನತೆಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕ್ಯಾಂಪ್ಕೋ ಸಿಬ್ಬಂದಿಗಳು ಮತ್ತು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಂದ ಜಾಥಾ ಕಾರ್ಯಕ್ರಮವು ನಡೆಯಿತು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯ ಮುಂದೆ ಜಾಥಾಕ್ಕೆ ಚಾಲನೆ ನೀಡಿದರು. ದರ್ಭೆ ವೃತ್ತದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸೇರಿಕೊಂಡು ಜಾಥಾವನ್ನು ಮುನ್ನಡೆಸಿದರು. ಜಾಥಾವು ದರ್ಭೆಯಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಬಸ್ಸುನಿಲ್ದಾಣ, ವೆಂಕಟ್ರಮಣ ದೇವಳ, ಅಂಚೆ ಕಛೇರಿಯ ಮುಂಬದಿಯಿಂದ ಶ್ರೀಧರ ಭಟ್ ಅವರ ಅಂಗಡಿಯ ಮುಂದಾಗಿ ಕಿಲ್ಲೆ ಮೈದಾನದಲ್ಲಿ ಸಮಾಪನಗೊಂಡಿತು.
ಯಂತ್ರಮೇಳ ಮತ್ತು ಸುವರ್ಣ ಮಹೋತ್ಸವಾಚರಣೆಯ ಕರಪತ್ರಗಳನ್ನು ಹಂಚಲಾಯಿತು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಎಚ್.ಎಮ್.ಕೃಷ್ಣ ಕುಮಾರ್, ನಿರ್ದೇಶಕರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ, ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್, ಯಂತ್ರಮೇಳದ ಸಂಯೋಜಕ ರವಿಕೃಷ್ಣ.ಡಿ.ಕಲ್ಲಾಜೆ, ನಿರ್ದೇಶಕರಾದ ಸಂತೋಶ್ ಕುತ್ತಮೊಟ್ಟೆ, ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

jatha3
jatha2
jatha1
Sponsors

Related Articles

Back to top button