ಮೇಕೆದಾಟು ಪಾದಯಾತ್ರೆಯನ್ನು ತಡೆಯಲು ಮಾತ್ರ ಕರ್ಫ್ಯೂ, ಜನಸಾಮಾನ್ಯರ ಹಿತಕ್ಕಾಗಿ ಅಲ್ಲ — ಶೌವಾದ್ ಗೂನಡ್ಕ…

ಮಂಗಳೂರು: ವೀಕೆಂಡ್ ಕರ್ಫ್ಯೂ ರದ್ದು ಹಾಗೂ ಹಲವು ನಿಬಂಧನೆಗಳನ್ನು ರಾಜ್ಯ ಸರ್ಕಾರವು ಸಡಿಲಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಯನ್ನು ತಡೆಯುವ ಸಲುವಾಗಿ ಮಾತ್ರ ರಾಜ್ಯ ಸರ್ಕಾರ ಕೊರೋನಾ ಕಾರಣ ನೀಡಿ ಕರ್ಫ್ಯೂ ಜಾರಿಗೊಳಿಸಿದ್ದು ದೃಢವಾಗಿದೆ ಎಂದು ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ ತಿಳಿಸಿದ್ದಾರೆ.
ಮೇಕೆದಾಟು ಪಾದಯಾತ್ರೆಯಿಂದ ಬಿ.ಜೆ.ಪಿ.ಗೆ ಉಂಟಾಗುವ ಹಿನ್ನಡೆಯನ್ನು ಅರಿತು ಕೊರೋನಾ ನೆಪವೊಡ್ಡಿ ಪಾದಯಾತ್ರೆಯನ್ನು ತಡೆಯಲಾಗಿತ್ತು, ಪ್ರಸ್ತುತ ಕೋವಿಡ್ ಪ್ರಕರಣಗಳು ಇಳಿಕೆಯಾಗದಿದ್ದರೂ ಕೂಡ ಯಾತಕ್ಕಾಗಿ ಕರ್ಫ್ಯೂವನ್ನು ರದ್ದುಗೊಳಿಸಲಾಗಿದೆ? ಈಗ ಸರ್ಕಾರಕ್ಕೆ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲವೇ? ಎಂದು ಶೌವಾದ್ ಗೂನಡ್ಕರವರು ಪ್ರಶ್ನಿಸಿದ್ದಾರೆ.
ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ವ್ಯಾಪಾರಿಗಳು, ಉದ್ಯಮಿಗಳ ಬೇಡಿಕೆಯನ್ನು ಪರಿಗಣಿಸಿ ಕರ್ಫ್ಯೂ ರದ್ದುಗೊಳಿಸಲಾಗಿದೆ ಎಂದು ಸರ್ಕಾರವು ಹೇಳುತ್ತಿದೆ ಅದು ಸ್ವಾಗತಾರ್ಹವೂ ಕೂಡ ಆದರೆ ಈ ಹಿಂದೆಯೇ ಹಲವು ಬಾರಿ ವ್ಯಾಪಾರೋದ್ಯಮಿಗಳು ಕರ್ಫ್ಯೂ ಹೇರದಂತೆ ಒತ್ತಾಯ ಮಾಡಿದ್ದರು ಆದರೆ ಆ ಸಂದರ್ಭ ಅವರ ಮೇಲೆ ಇಲ್ಲದ ಅನುಕಂಪ ಸರ್ಕಾರಕ್ಕೆ ಈಗ ಹೇಗೆ ಬಂತು? ರಾಜ್ಯ ಬಿ.ಜೆ.ಪಿ.ಸರ್ಕಾರವು ರಾಜಕೀಯ ಕಾರಣಗಳಿಗಾಗಿ ಮಾತ್ರ ಕರ್ಫ್ಯೂ ಜಾರಿಗೊಳಿಸಿತ್ತೇ ಹೊರತು ಜನಸಾಮಾನ್ಯರ ಆರೋಗ್ಯದ ಹಿತಕ್ಕಾಗಿ ಅಲ್ಲವೆಂದು ಶೌವಾದ್ ಗೂನಡ್ಕರವರು ಹೇಳಿದ್ದಾರೆ.

Sponsors

Related Articles

Back to top button