ದ.ಕ- ಶನಿವಾರವೂ ಖಾಸಗಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ….
ಮಂಗಳೂರು: ದ.ಕ.ಜಿಲ್ಲಾಡಳಿತವು ಎ.14ರವರೆಗೆ ವಿಧಿಸಿರುವ ಸೆ.144(3)ಕ್ಕೆ ಪೂರಕವಾಗಿ ಹೆಚ್ಚುವರಿ ಕೆಲವು ನಿರ್ಬಂಧವನ್ನು ವಿಧಿಸಿ ಗುರುವಾರ ಹೊರಡಿಸಿದ ಆದೇಶದಂತೆ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ಶನಿವಾರವೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ವೀಡಿಯೋ ಸಂದೇಶ ನೀಡಿದ ಅವರು ಶುಕ್ರವಾರದಿಂದ ಖಾಸಗಿ ವಾಹನಗಳ ಸಂಚಾರವನ್ನು ಜಿಲ್ಲಾದ್ಯಂತ ಸಂಪೂರ್ಣ ನಿಷೇಧಿಸಲಾಗಿದೆ. ಅನುಮತಿ ಇಲ್ಲದಿರುವ ಎಲ್ಲಾ ವಾಹನಗಳ ತಿರುಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ದಿನಸಿ ಖರೀದಿಗಾಗಿ ಮೀಸಲಿಟ್ಟಿರುವ ಬೆಳಗ್ಗೆ 7ರಿಂದ 12ರವರೆಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ತಮ್ಮ ಮನೆ ಸಮೀಪದ ಅಂಗಡಿಗಳಿಂದ ದಿನಸಿ ಖರೀದಿ ಮಾಡಬಹುದು ಎಂದರು.
ಜನರ ಆರೋಗ್ಯದ ದೃಷ್ಟಿಯಿಂದ ಮನೆಮನೆಗೆ ಬರುವ ಆಶಾ ಕಾರ್ಯಕರ್ತೆಯರನ್ನು ಗೌರವದಿಂದ ಕಾಣಬೇಕು. ಆಶಾ ಕಾರ್ಯಕರ್ತೆಯರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳುವ ಪ್ರಕರಣ ಕಂಡುಬಂದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಜನರ ಪ್ರಾಣ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ್ ಗಳು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರ ಬಗ್ಗೆ ಸಹಾನುಭೂತಿಯಿಂದ ವರ್ತಿಸಬೇಕು ಎಂದು ಅವರು ತಿಳಿಸಿದರು.