ನೆಟ್ಟಾರು- ಬೈಕ್ ಗುದ್ದಿ ಬಾಲಕ ಸಾವು ..
ಸುಳ್ಯ : ತಂದೆ-ತಾಯಿಯೊಂದಿಗೆ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬಾಲಕನೋರ್ವನಿಗೆ ಬೈಕೊಂದು ಗುದ್ದಿ ಮೃತಪಟ್ಟ ಘಟನೆ ಬೆಳ್ಳಾರೆಯ ನೆಟ್ಟಾರು ಸಮೀಪ ಬಾಯಂಬಾಡಿ ಎಂಬಲ್ಲಿ ಜ. 22 ರಂದು ನಡೆದಿದೆ.
ಮೃತಪಟ್ಟ ಬಾಲಕನನ್ನು ಕೊಳ್ತಿಗೆ ಗ್ರಾಮದ ಎಕ್ಕಡ್ಕ ಮನೆ ಮೋಹನ್ ಹಾಗೂ ಶೇಷಮ್ಮ ದಂಪತಿಯ ಪುತ್ರ ಅವಿನಾಶ್ (10) ಎಂದು ಗುರುತಿಸಲಾಗಿದೆ.ಅವಿನಾಶ್ ತನ್ನ ತಂದೆ-ತಾಯಿಯೊಂದಿಗೆ ಬಾಯಂಬಾಡಿ ದೇವಸ್ಥಾನದ ಜಾತ್ರೋತ್ಸವಕ್ಕೆ ಹೋಗಿ ರಾತ್ರಿ ವೇಳೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಮೋಟಾರ್ ಬೈಕೊಂದು ಗುದ್ದಿ ಪರಾರಿಯಾಗಿದೆ.
ಬೈಕ್ ಗುದ್ದಿದ ರಭಸಕ್ಕೆ ಬಾಲಕನ ಮುಖ, ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಬಾಲಕನನ್ನು ಬೆಳ್ಳಾರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯಲ್ಲಿ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.