ಪಂಡಿತ್ ದೀನ್ ದಯಾಳ್ ಜನ್ಮದಿನಾಚರಣೆ-ದೀನ್‍ದಯಾಳ್‍ರ ಏಕಾತ್ಮ ಮಾನವತಾವಾದ ಅತ್ಯಂತ ಪ್ರಸ್ತುತ:ಅಪ್ಪಯ್ಯ ಮಣಿಯಾಣಿ…..

ಪುತ್ತೂರು : ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಅವರು ಭಾರತೀಯ ಸಾಮಾಜಿಕ, ಆರ್ಥಿಕ, ಕೌಟುಂಬಿಕ, ರಾಜಕೀಯ ವ್ಯವಸ್ಥೆಗಳ ಕುರಿತಂತೆ ತಳಸ್ಪರ್ಶಿ ಜ್ಞಾನ ಹೊಂದಿದ್ದರು. ಅವರ ಸಾಮಾಜಿಕ ಮತ್ತು ಆರ್ಥಿಕ ಚಿಂತನೆಯ ಸಂಗಮವಾಗಿರುವ ಏಕಾತ್ಮ ಮಾನವತಾವಾದವು ದೇಶದ ಸಮಗ್ರ ಅಭಿವೃದ್ಧಿಯ ಚಿಂತನೆಯನ್ನು ಹೊಂದಿದ್ದು, ಇಂದಿನ ದಿನಗಳಲ್ಲಿ ಅತ್ಯಂತ ಪ್ರಸ್ತುತವಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಎಸ್. ಅಪ್ಪಯ್ಯ ಮಣಿಯಾಣಿ ಹೇಳಿದರು.
ಅವರು ಪುತ್ತೂರು ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 103ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ದೀನ್ ದಯಾಳ್ ಜೀವನ ಮತ್ತು ಸಾಧನೆಯ ಕುರಿತು ಮಾತನಾಡಿದರು.
ದೀನ್‍ದಯಾಳ್ ಉಪಾಧ್ಯಾಯರ ಏಕಾತ್ಮ ಮಾನವತಾವಾದವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ಚಿಂತನೆ ಹೊಂದಿದೆ. ಅಂತ್ಯೋದಯ, ಸಾಮಾಜಿಕ ಪರಿವರ್ತನೆಯೊಂದಿಗೆ ಭಾರತ ಪರಮೋಚ್ಛ ಸ್ಥಿತಿಗೆ ತಲುಪಬೇಕೆಂಬ ಆಶಯವನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಅವರ ಆಶಯಗಳನ್ನು ಈಡೇರಿಸಲು ಒತ್ತು ನೀಡುತ್ತಿರುವುದು ಅತ್ಯಂತ ಅಭಿಮಾನದ ಸಂಗತಿಯಾಗಿದೆ ಎಂದರು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಏಕ್ ಭಾರತ್ ಶ್ರೇಷ್ಠ್ ಭಾರತ್ ಚಿಂತನೆಯು ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರ ಏಕಾತ್ಮ ಮಾನವತಾವಾದದ ಮೂಲ ಆಶಯವನ್ನು ಹೊಂದಿದೆ ಎಂದರು.
ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ. ಜೀವಂಧರ್ ಜೈನ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಂಗಾರಡ್ಕ ವಿಶ್ವೇಶ್ವರ ಭಟ್, ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸದಸ್ಯ ಚಂದ್ರಶೇಖರ ರಾವ್ ಬಪ್ಪಳಿಗೆ, ತಾಲೂಕು ಪಂಚಾಯತ್ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ನಗರಸಭಾ ಸದಸ್ಯರಾದ ಪ್ರೇಮಲತಾ ನಂದಿಲ, ವಿದ್ಯಾ ಆರ್. ಗೌರಿ, ಗೌರಿ ಬನ್ನೂರು, ಪಿ.ಜಿ. ಜಗನ್ನಿವಾಸ್ ರಾವ್, ಪ್ರೇಮ್ ಕುಮಾರ್, ಶಿವರಾಮ ಸಪಲ್ಯ, ಶೀನಪ್ಪ ನಾಯ್ಕ, ಪ್ರೇಮಾ ರಂಜನ್ ದಾಸ್, ಮನೋಹರ್ ಕಲ್ಲಾರೆ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಕ್ಷೆತ್ರ ರೈತಮೋರ್ಚಾದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಸ್ವಾಗತಿಸಿದರು. ಬಿಜೆಪಿ ನಗರಮಂಡಲ ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button