ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ವಿಶ್ವ ಜಲ ದಿನಾಚರಣೆ…

ಪುತ್ತೂರು: ಮಾನವ ಹಾಗೂ ಇಡೀ ಜೀವಸಂಕುಲಕ್ಕೆ ನೀರು ಸಂಜೀವಿನಿಯಾಗಿದೆ. ಅದು ಪ್ರಕೃತಿ ನೀಡಿದ ಅಮೃತ. ನಿಸರ್ಗದತ್ತವಾಗಿ ದೊರೆಯುವ ಜಲದ ಪ್ರಾಮುಖ್ಯತೆ, ಅಗತ್ಯತೆ ಮತ್ತು ಅಮೂಲ್ಯತೆಯನ್ನು ತಿಳಿದುಕೊಂಡು ಬಳಸಬೇಕಾದದ್ದು ನಮ್ಮ ಕರ್ತವ್ಯ ಎಂದು ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಪ್ರೊಫೆಸರ್ ಡಾ.ಬಿ.ಇ.ಯೋಗೇಂದ್ರ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಐಎಸ್‍ಟಿಇ ಸ್ಟೂಡೆಂಟ್ ಚಾಪ್ಟರ್ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ವಿಶ್ವ ಜಲ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ತೀವ್ರಗತಿಯ ಅರಣ್ಯನಾಶ, ಮಿತಿಮೀರಿದ ಮಾಲಿನ್ಯ, ಪ್ರಾಕೃತಿಕ ಸಂಪನ್ಮೂಲಗಳ ಅವ್ಯಾಹತ ಬಳಕೆ, ಪರಿಸರದ ಮೇಲಾಗುತ್ತಿರುವ ಕ್ರೌರ್ಯದಿಂದಾಗಿ ಹಸಿರುಮನೆಯ ಪರಿಣಾಮ ಜಾಸ್ತಿಯಾಗಿ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿದ್ದು ಪ್ರತಿದಿನವೂ ಜಲದಿನವನ್ನಾಗಿ ಆಚರಿಸುವ ಅನಿವಾರ್ಯತೆ ಎದುರಾಗಿದೆ ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್.ಬಿ ಮಾತನಾಡಿ ಮಾನವ ಭೂತಾಯಿಯ ಒಡಲಲ್ಲಿ ದೊರೆಯುವ ಜಲಸಂಪನ್ಮೂಲದ ಮೇಲೆ ಸರಿಪಡಿಸಲಾಗದಷ್ಟು ಮಟ್ಟಿನಲ್ಲಿ ಕ್ರೌರ್ಯವನ್ನು ಮೆರೆದಿದ್ದಾನೆ. ಇದು ಹೀಗೆಯೇ ಮುಂದುವರಿದರೆ ಜೀವಜಲವೇ ಸಿಗದೆ ಹಪಹಪಿಸಬೇಕಾಗಬಹುದು. ಅದಕ್ಕಾಗಿ ಮಳೆ ನೀರನ್ನು ಹಿಡಿದಿಟ್ಟು ಬಳಸುವ ವಿಧಾನವನ್ನು ಅನುಸರಿಸಬೇಕು, ತನ್ಮೂಲಕ ಅಂತರ್ಜಲವನ್ನು ಕಾಪಾಡಬೇಕು ಎಂದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಆನಂದ್.ವಿ.ಆರ್ ಸ್ವಾಗತಿಸಿದರು. ಪ್ರೊ.ಸುಮಂತ್ ಪ್ರಸ್ತಾವನೆಗೈದರು. ಕಾರ್ಯಕ್ರಮ ಸಂಯೋಜಕ ಪ್ರೊ.ಜಯಕೃಷ್ಣ ಭಟ್.ಡಿ ವಂದಿಸಿದರು. ಶ್ರಾವಣಿ.ಸಿ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button