‘ಪದ್ಯಾಣ ಪ್ರಶಸ್ತಿ’ಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ…..

ಬಂಟ್ವಾಳ: ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಹಾಗೂ ಯಕ್ಷಶಿಕ್ಷಣ ಶಿಕ್ಷಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಈ ಸಾಲಿನ ‘ಪದ್ಯಾಣ ಪ್ರಶಸ್ತಿ’ ಘೋಷಣೆಯಾಗಿದೆ. ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ 2019 ದಶಂಬರ 15ರಂದು ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಪದ್ಯಾಣ ಕುಟುಂಬದ ಹಿರಿಯರಾದ ಕೀರ್ತಿಶೇಷ ಪದ್ಯಾಣ ಪುಟ್ಟು ಭಾಗವತರ ನೆನಪಿನಲ್ಲಿ ಪದ್ಯಾಣ ಪ್ರಶಸ್ತಿ ರೂಪುಗೊಂಡಿದೆ. ಮೂರು ವರುಷಗಳ ಹಿಂದೆ ಸ್ಥಾಪಿಸಿದ ಪ್ರಶಸ್ತಿಯನ್ನು ಹಿರಿಯ ಭಾಗವತರಾದ ಅಗರಿ ರಘುರಾಮ ಭಾಗವತರು, ಬಲಿಪ ನಾರಾಯಣ ಭಾಗವತರು, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಇವರಿಗೆ ಪ್ರದಾನಿಸಲಾಗಿತ್ತು.
ಪದ್ಯಾಣ ಮನೆತನಕ್ಕೆ ಯಕ್ಷ ಕಲೆಯು ನೀಡಿದ ಗೌರವಕ್ಕೆ ಪ್ರತಿಯಾಗಿ ‘ಕಲಾಕೃತಜ್ಞತೆ’ಯ ದ್ಯೋತಕವಾಗಿ ಪದ್ಯಾಣ ಪ್ರಶಸ್ತಿ ಸ್ಥಾಪಿತವಾಗಿದೆ. ಈ ವರುಷ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಪ್ರಶಸ್ತಿ. ತೆಂಕುತಿಟ್ಟಿನ ಹಳೆಯ ಪಾರಂಪರಿಕ ಶೈಲಿಯೊಂದಕ್ಕೆ ಸಲ್ಲುವ ಗೌರವವಿದು.
ಸುಬ್ರಹ್ಮಣ್ಯ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಪರಂಪರೆಯ ಪ್ರಾತಿನಿಧಿಕ ಕಲಾವಿದ. ಪ್ರಸಿದ್ಧ ಮಾಂಬಾಡಿ ಮನೆತನ. ಇವರ ತಂದೆ ಮಹಾನ್ ಗುರು ಮಾಂಬಾಡಿ ನಾರಾಯಣ ಭಾಗವತರು. ಸುಬ್ರಹ್ಮಣ್ಯ ಭಟ್ಟರು ಸಾವಿರಾರು ಹಿಮ್ಮೇಳ ಕಲಾವಿದರನ್ನು ರೂಪಿಸಿದವರು. ಕಳೆದ ಐದು ದಶಕಗಳಿಂದ ಯಕ್ಷ ಶಿಕ್ಷಣಕ್ಕೆ ಮಾನ ನೀಡಿದವರು. ವಿವಿಧ ಮೇಳಗಳಲ್ಲಿ ವ್ಯವಸಾಯ ಮಾಡಿದ ಅನುಭವಿ. ಈ ಸಂದರ್ಭದಲ್ಲಿ ‘ಶ್ರೀ ಹನುಮಗಿರಿ ಮೇಳ’ದವರಿಂದ ‘ಸತ್ಯಾಂತರಂಗ’ ಪ್ರಸಂಗದ ಬಯಲಾಟ ನಡೆಯಲಿದೆ.

Sponsors

Related Articles

Leave a Reply

Your email address will not be published. Required fields are marked *

Back to top button