ಪುತ್ತೂರಿಗೆ ಎಸ್ಪಿ ಕಚೇರಿ ಅಂತಿಮ ಸ್ವರೂಪ-ಶಾಸಕ ಮಠಂದೂರು…
ಪುತ್ತೂರು: ಪುತ್ತೂರನ್ನು ಜಿಲ್ಲಾಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಎಸ್ಪಿ ಕಚೇರಿ ಆರಂಭಿಸುವ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಈ ಭಾಗದ ಶಾಸಕರೊಂದಿಗೆ ಗೃಹ ಸಚಿವರಲ್ಲಿ ಮಾತುಕತೆ ನಡೆಸಿ ಅಂತಿಮ ಸ್ವರೂಪ ನೀಡಲಾಗುವುದು. ಈಗಾಗಲೇ ಎಸ್ಪಿ ಕಚೇರಿಗೆ ಬಲ್ನಾಡಿನಲ್ಲಿ ಸ್ಥಳ ಗುರುತಿಸುವ ಕೆಲಸ ನಡೆಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಸೋಮವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಪುತ್ತೂರಿನ ಎಸ್ ಪಿಕಚೇರಿಗೆ ತೆರೆಯುವ ಬಗ್ಗೆ ಈಗಾಗಲೇ ಐಜಿ ಮತ್ತು ಗೃಹಸಚಿವರೊಂದಿಗೆ ಸುಳ್ಯ ಬೆಳ್ತಂಗಡಿ, ಬಂಟ್ವಾಳ ಶಾಸಕರಿದ್ದು, ಮಾತುಕತೆ ನಡೆಸಲಾಗಿದೆ. ಈ ಭಾಗದ ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಎಸ್ಪಿ ಆಡಳಿತ ಕಚೇರಿ ಮತ್ತು ಪೊಲೀಸ್ ಬೆಟಾಲಿಯನ್ ವ್ಯವಸ್ಥೆಗಾಗಿ ಸುಮಾರು 15 ಎಕರೆ ಸ್ಥಳ ಬೇಕಾಗಿದೆ. ಅಷ್ಟು ಜಾಗ ನಗರ ವ್ಯಾಪ್ತಿಯ ಒಂದೇ ಕಡೆ ದೊರೆಯುವುದು ಅಸಾಧ್ಯವಾಗಿರುವ ಕಾರಣ ಎಸ್ಪಿ ಆಡಳಿತ ಕಚೇರಿಯನ್ನು ಒಂದೆಡೆ ಆರಂಭಿಸಿ ಇನ್ನೊಂದು ಕಡೆ ಬೆಟಾಲಿಯನ್ ವ್ಯವಸ್ಥೆ ಹಾಗೂ ವಸತಿ ಗೃಹಗಳನ್ನು ನಿರ್ಮಾಣ ಮಾಡುವ ಇರಾದೆ ಇದೆ ಎಂದು ಅವರು ತಿಳಿಸಿದರು.
ಪುತ್ತೂರಿನ ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣವು ಆ ಭಾಗದ ವಿದ್ಯಾಸಂಸ್ಥೆಗಳ ಮಕ್ಕಳಿಗೆ ಅಗತ್ಯವಿರುವುದರಿಂದ ಬೇರೆ ಕಡೆಗೆ ಸ್ಥಳಾಂತರಿಸಿ ಯುವಜನ ಇಲಾಖೆಯ ಸಾರ್ವಜನಿಕ ಸಿಂಥೆಟಿಕ್ ಒಳಾಂಗಣ ಮತ್ತು ಹೊರಾಂಗಣ ವ್ಯವಸ್ಥೆಯ ತಾಲೂಕು ಕ್ರೀಡಾಂಗಣವನ್ನು ನಿರ್ಮಿಸುವ ಯೋಜನೆ ಇದೆ. ಈಗಾಗಲೇ ಕ್ರೀಡಾಂಗಣಕ್ಕಾಗಿ ರೂ.3 ಕೋಟಿ ಮಂಜೂರು ಗೊಂಡಿದೆ. ಮೊಟ್ಟೆತ್ತಡ್ಕದಲ್ಲಿರುವ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ಹಿಂಬದಿಯಲ್ಲಿರುವ ಸ್ಥಳವನ್ನು ಗುರುತಿಸಲಾಗಿದ್ದು, ಪ್ರಕ್ರಿಯೆಗಳು ಇನ್ನಷ್ಟೇ ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು.
ಮುಂದಿನ ವರ್ಷದಿಂದ ಮಾಣಿ ಮೈಸೂರು ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಲಿದ್ದು, ಚತುಷ್ಪಥ ರಸ್ತೆಯಾಗಿ ಪರಿವರ್ತನೆಗೊಳ್ಳಲಿದೆ. ಮಾಣಿಯಿಂದ ಸಂಪಾಜೆ ತನಕ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ ಎಂದು ತಿಳಿಸಿದ ಅವರು
ಮಾಡಾವಿನಲ್ಲಿರುವ 110 ಕೆವಿ ಸಾಮಥ್ರ್ಯದ ವಿದ್ಯುತ್ ಸಬ್ ಸ್ಟೇಷನ್ ಗೆ ಎದುರಾಗಿದ್ದ ನ್ಯಾಯಾಲಯ ತಡೆಯಾಜ್ಞೆ ಸಮಸ್ಯೆ ಇದೀಗ ತೆರವಾಗಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಕೆಲಸ ನಡೆಯಲಿದೆ. ಕೈಕಾರದಲ್ಲಿ 110 ಕೆವಿ ವಿದ್ಯುತ್ ಸಬ್ಸ್ಟೇಷನ್ ಗೆ ಸೂಕ್ತ ಜಾಗ ಸಿಗದ ಕಾರಣ ಕೈಕಾರ ವ್ಯಾಪ್ತಿಯ ಬೇರೆ ಸ್ಥಳದಲ್ಲಿ ಜಾಗ ಖರೀದಿಸಿ ಕಾಮಗಾರಿ ಆರಂಭಿಸಲಾಗುವುದು. ಉಪ್ಪಿನಂಗಡಿಯ 33 ಕೆವಿ ಸಬ್ ಸ್ಟೇಷನ್ ಗಾಗಿ ಬದಲಿ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ. ಕಾವಿನಲ್ಲೂ 33 ಕೆವಿ ವಿದ್ಯುತ್ ಉಪಕೇಂದ್ರದ ಕೆಲಸ ನಡೆಯುತ್ತಿದೆ. ಈ ಎಲ್ಲಾ ವಿದ್ಯುತ್ ಕೇಂದ್ರಗಳು ಕಾರ್ಯಾರಂಭಿಸಿದರೆ ಪುತ್ತೂರಿನ ವಿದ್ಯುತ್ ಸಮಸ್ಯೆ ಮಾಯವಾಗಲಿದೆ ಎಂದರು.
ಮಂಗಳೂರು- ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ ಹೆದ್ದಾರಿ ನಿರ್ಮಾಣ ಯೋಜನೆ ವೆಚ್ಚದ ಅಂದಾಜುಪಟ್ಟಿ ಸಿದ್ಧತಾ ಹಂತದಲ್ಲಿದೆ. ಇದು ಕೂಡಾ ಶೀಘ್ರವೇ ಅನುಷ್ಠಾನಕ್ಕೆ ಬರುವ ನಿರೀಕ್ಷೆಯಿದೆ. ರಿಂಗ್ ರೋಡ್ ನಿರ್ಮಾಣದ ಕುರಿತಾಗಿಯೂ ಚಿಂತನೆ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪುತ್ತೂರು ನಗರ ಮಂಡಲದ ಅಧ್ಯಕ್ಷ ಜೀವಂಧರ ಜೈನ್, ಗ್ರಾಮಾಂತರ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಆರ್.ಸಿ. ನಾರಾಯಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.