ಪುತ್ತೂರಿನಲ್ಲಿ ಇಂಜಿನಿಯರ್ಸ್ ಡೇ ಕಾರ್ಯಕ್ರಮ…..

ಪುತ್ತೂರು: ಅವಿಭಜಿತ ದ.ಕ. ಮತ್ತು ಕೊಡಗು ಜಿಲ್ಲೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮಳೆಗಾಲದ ದಿನಗಳಲ್ಲಿ ಕಿತ್ತುಹೋಗಿ ಅವ್ಯವಸ್ಥೆಗೆ ಕಾರಣವಾಗುತ್ತಿದ್ದು, ಪ್ರತೀ ವರ್ಷವೂ ರಸ್ತೆಗಳ ಹಾನಿಯಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳುತ್ತದೆ. ಈ ಹಿನ್ನೆಲೆಯಲ್ಲಿ ಅವಿಭಜಿತ ದ.ಕ. ಮತ್ತು ಕೊಡಗು ಜಿಲ್ಲೆಗಳ ಪ್ರಾಕೃತಿಕ ಗುಣಲಕ್ಷಣಗಳಿಗೆ ಅನುಗುಣವಾಗಿ ರಸ್ತೆಗಳನ್ನು ನಿರ್ಮಾಣ ಮಾಡುವಂತೆ ಭಾನುವಾರ ಪುತ್ತೂರಿನಲ್ಲಿ ನಡೆದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ-ಕಿರಿಯ ಇಂಜಿನಿಯರ್ ಗಳಿಗೆ ಸನ್ಮಾನ ಹಾಗೂ ಸನ್ಮಾನಿತ ಇಂಜಿನಿಯರ್ ಗಳಿಂದ ವೃತ್ತಿ ನೈಪುಣ್ಯತೆಯ ಕುರಿತು ಅನುಭವದ ಮಾತುಗಳ ಮಂಡನೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅಡಕೆ ಮರವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಏರಬಲ್ಲ ಯಂತ್ರವನ್ನು ಆವಿಷ್ಕರಿಸಿದ ಕೃಷಿ ಸಂಶೋಧಕ ಗಣಪತಿ ಭಟ್ ಅವರನ್ನು ಸನ್ಮಾನಿಸಲಾಯಿತು. ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳ ಸಿವಿಲ್ ಇಂಜಿನಿಯರ್ ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದಿ ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್, ಕೊಡಗು, ದ.ಕ., ಉಡುಪಿ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಇನ್ಸಿಟ್ಯೂಟ್ ಆಫ್ ವ್ಯಾಲ್ಯೂವರ್ಸ್ ಹಾಗೂ ಪೇಸ್ ಪುತ್ತೂರು ಸಹಯೋಗದಲ್ಲಿ ನಗರದ ಕಲ್ಲೇಗದಲ್ಲಿರುವ ಮಾಸ್ಟರ್ ಪ್ಲಾನರಿಯ ಸರ್ ಎಂ.ವಿ. ಹಾಲ್‍ನಲ್ಲಿ ಇಂಜಿನಿಯರ್ಸ್ ಡೇ ಕಾರ್ಯಕ್ರಮ ನಡೆಯಿತು.
ಸರ್ ಎಂ. ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ತೂಗು ಸೇತುವೆಗಳ ಸರದಾರ ಪದ್ಮಶ್ರೀ ಗಿರೀಶ್ ಭಾರಧ್ವಾಜ್ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರ ಆದರ್ಶ, ಪ್ರತಿಭೆ, ಪ್ರಾಮಾಣಿಕತೆ, ನಿಷ್ಕಪಟತೆ, ನ್ಯಾಯನಿಷ್ಠ ಹಾಗೂ ಸ್ವಚ್ಛ ಸುಂದರ ಪಾರದರ್ಶಕ ಬದುಕು ಪ್ರತಿಯೊಬ್ಬ ಇಂಜಿನಿಯರ್‍ಗೂ ಆದರ್ಶವಾಗಿರಬೇಕು. ಸಿವಿಲ್ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಅವರು ನಮಗೆ ಅತ್ಯಂತ ಪ್ರಸ್ತುತರಾಗುತ್ತಾರೆ ಎಂದರು. ಈ ದಿಸೆಯಲ್ಲಿ ಯುವ ಇಂಜಿನಿಯರ್‍ಗಳು ಕೌಶಲ್ಯ ಮತ್ತು ಕಾರ್ಯ ತತ್ಪರತೆಯೊಂದಿಗೆ ಕ್ರೀಯಾಶೀಲರಾಗಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಸಂಘಟನಾ ಸಂಸ್ಥೆಗಳ ಪದಾಧಿಕಾರಿಗಳಾದ ಆನಂದ ಕುಮಾರ್ ಕೆ.ಎಸ್., ಡಾ. ಕೆ.ಎಸ್. ಬಾಬು ನಾರಾಯಣ, ಪಿ.ಡಿ. ಕಾಂತರಾಜ್, ಎಚ್.ಎಲ್. ರಾವ್ ಉಪಸ್ಥಿತರಿದ್ದರು.
ಪೇಸ್‍ನ ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿದರು. ಕೊಡಗು, ದ.ಕ., ಉಡುಪಿ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಎಂ. ದಿವಾಕರ ಶೆಟ್ಟಿ ವಂದಿಸಿದರು. ಸಿವಿಲ್ ಇಂಜಿನಿಯರ್ ಕೆ. ವಸಂತ ಭಟ್ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button