ಪುತ್ತೂರಿನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ…..
ಪುತ್ತೂರು: ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದ್ದು, ಸಾವಿರಾರು ಮನೆಗಳು ನಾಶವಾಗಿದೆ ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ಪರಿಹಾರ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿಗಳು ಸೇರಿದಂತೆ ಯಾವುದೇ ಬಿಜಪಿ ಮುಖಂಡರು ಪರಿಹಾರ ದೊರಕಿಸಿಕೊಡುವ ಪ್ರಯತ್ನ ನಡೆಸಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್ ಆರೋಪಿಸಿದರು.
ಅವರು ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಗಾಂಧಿ ಕಟ್ಟೆಯ ಮುಂಬಾಗದಲ್ಲಿ ಗುರುವಾರ ಕಾಂಗ್ರೆಸ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ನಡೆದ ಪ್ರತಿಭಟನೆ, ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರವಾಹದಿಂದಾಗಿ ಮನೆ, ಮಠ ಕಳೆದುಕೊಂಡ ರಾಜ್ಯದ ಜನತೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅವರ ಕಣ್ಣೀರು ಒರೆಸಬೇಕಾಗಿದ್ದ ಪ್ರಧಾನಿ ಮೋದಿ ಅವರು ಭೂತಾನ್ಗೆ ಹೋಗಿ ಅಲ್ಲಿ ಫೋಟೋ ಫೋಸ್ ನೀಡುತ್ತಾರೆ. ರಾಜ್ಯದಲ್ಲಿ ಭೀಕರ ಪ್ರವಾಹ ಬಂದಿದ್ದರೂ ಒಮ್ಮೆಯೂ ಇಲ್ಲಿಗೆ ಬಂದು ಪರಿಸ್ಥಿತಿ ಅಧ್ಯಯನ ಮಾಡುವ ಮನಸ್ಸು ಪ್ರಧಾನಿ ಮಾಡಲಿಲ್ಲ. ಅವರು ಬೆಂಗಳೂರಿಗೆ ಬಂದಿದ್ದರೂ, ನಷ್ಟದ ಪಟ್ಟಿಯನ್ನೂ ನೋಡಿಲ್ಲ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ನ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಮಾತನಾಡಿ, ರಾಜ್ಯದಲ್ಲಿ ಹೆಸರಿಗೆ ಮಾತ್ರ ಸರಕಾರವಿದೆ. 25 ದಿನಗಳ ಕಾಲ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯನಂತೆ ಕೆಲಸ ಮಾಡಿದ ಯುಡಿಯೂರಪ್ಪ ನಂತರ ಮಂತ್ರಿಮಂಡಲ ವಿಸ್ತಿರಿಸಿದ್ದರೂ ಅದೂ ಪೂರ್ಣವಾಗಿಲ್ಲ. 16 ಖಾತೆಗಳನ್ನು ತಮ್ಮೊಬ್ಬರಲ್ಲೇ ಇಟ್ಟುಕೊಂಡಿದ್ದಾರೆ. ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನೂ ನೇಮಿಸಿಲ್ಲ. ಇಲ್ಲಿ ನಿಜಕ್ಕೂ ಸರಕಾರವಿಲ್ಲ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಮೈತ್ರಿ ಸರಕಾರ ಕೆಡವುವ ಸಂದರ್ಭ ಶಾಸಕರನ್ನು ಖರೀದಿಸಲು ಕೋಟಿ ಕೋಟಿ ಹಣ ಇವರಲ್ಲಿದೆ. ಈಗ ನೆರೆ ಪರಿಹಾರ ಕೊಡಲು ಮಾತ್ರ ಚಿಕ್ಕಾಸೂ ದುಡ್ಡಿಲ್ಲ. ಡಿ.ಕೆ. ಶಿವಕುಮಾರ್ ವಿರುದ್ಧ ಇಡಿ ಮೂಲಕ ದಾಳಿ ಮಾಡಿಸಿದ ಕೇಂದ್ರ ಸರಕಾರ, ಈಬಾರಿ ನಡೆದ ಆಪರೇಶನ್ ಕಮಲದಲ್ಲಿ ಕೋಟಿ ಕೋಟಿ ಹಣ ಚಲಾವಣೆಯಾಗಿದೆ ಎಂದು ಸ್ವತಃ ಶಾಸಕರೇ ಸದನದಲ್ಲಿ ಹೇಳಿದ ಹೊರತಾಗಿಯೂ ಅದರ ಬಗ್ಗೆ ತನಿಖೆ ಮಾಡಿಲ್ಲ. ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದವರೆಲ್ಲ ಈಗ ಬಿಜೆಪಿಯವರಿಗೆ ದೇಶದ್ರೋಹಿಗಳಂತೆ ಕಾಣುತ್ತಿರುವುದು ಆಶ್ಚರ್ಯಕರವಾಗಿದೆ. ನಿನ್ನೆಯವರೆಗೂ ಒಳ್ಳೆಯ ವ್ಯಕ್ತಿಯಾಗಿದ್ದ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಈಗ ಬಿಜೆಪಿಯವರ ಪಾಲಿಗೆ ದೇಶದ್ರೋಹಿ ಆಗಿದ್ದಾರೆ ಎಂದು ಹೇಳಿದರು.
ಸುಮಾರು 3 ಗಂಟೆಗಳ ಕಾಲ ನಡೆದ ಪ್ರತಿಭಟನಾ ಸಭೆಯಲ್ಲಿ ಪಕ್ಷದ ಹಲವು ನಾಯಕರು ಮಾತನಾಡಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ವಿಟ್ಲ ಬ್ಲಾಕ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸಿಫ್, ಮುಖಂಡರಾದ ಉಮಾನಾಥ ಶೆಟ್ಟಿ, ಅಮಳ ರಾಮಚಂದ್ರ, ಕೃಷ್ಣಪ್ರಸಾದ್ ಆಳ್ವಾ, ವಿಲ್ಮಾ ಗೋನ್ಸಾಲ್ವಿಸ್, ಡಾ.ರಾಜಾರಾಂ, ನಝೀರ್ ಮಠ, ಇಸಾಕ್ ಸಾಲ್ಮರ, ಶಕೂರ್ ಹಾಜಿ, ಎಂ.ಬಿ. ವಿಶ್ವನಾಥ ರೈ, ಸಿದ್ದಿಕ್ ಸುಲ್ತಾನ್ ಕೂಡುರಸ್ತೆ ಮತ್ತಿತರರು ಉಪಸ್ಥಿತರಿದ್ದರು.