ಪುತ್ತೂರಿನಲ್ಲಿ ಪೌರಕಾರ್ಮಿಕರ ದಿನಾಚರಣೆ……

ಪುತ್ತೂರು: ನಗರದ ಸ್ವಚ್ಚತಾ ಸೇವೆ ಮಾಡುವ ಪೌರ ಕಾರ್ಮಿಕರನ್ನು ಗುರುತಿಸಿ ಗೌರವಿಸುವುದರೊಂದಿಗೆ ಅವರಿಗೆ ಧೈರ್ಯ, ಆತ್ಮವಿಶ್ವಾಸ ತುಂಬಿಸುವ ಕೆಲಸ ಸಮಾಜದಿಂದ ನಡೆಯಬೇಕು. ಸ್ವಚ್ಛ ಭಾರತ, ಶ್ರೇಷ್ಠ ಭಾರತ ಸಂಕಲ್ಪ ಈಡೇರುವಲ್ಲಿ ಪೌರ ಕಾರ್ಮಿಕರ ಪಾಲು ಬಹು ದೊಡ್ಡದಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಸೋಮವಾರ ಪುತ್ತೂರು ನಗರಸಭೆಯ ವತಿಯಿಂದ ಇಲ್ಲಿನ ಪುರಭವನದಲ್ಲಿ ಆಯೋಜಿಸಲಾಗಿದ್ದ `ಪೌರ ಕಾರ್ಮಿಕರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದಿನ ಪೌರಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರುವ ಪೌರಕಾರ್ಮಿಕರಿಗೆ ಶಾಸಕನ ನೆಲೆಯಲ್ಲಿ ನಗದು ಪುರಸ್ಕಾರ ನೀಡಲಿದ್ದೇನೆ. ಈ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪೌರಾಯುಕ್ತರು ಮಾಡಬೇಕು ಎಂದೂ ಅವರು ಸೂಚಿಸಿದರು.
ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ ಆರೋಗ್ಯವಂತ ಸಮಾಜ ಮತ್ತು ಆರೋಗ್ಯಪೂರ್ಣ ಪರಿಸರ ನಿರ್ಮಾಣದಲ್ಲಿ ಪೌರಕಾರ್ಮಿಕರ ಕೊಡುಗೆ ಅಭೂತಪೂರ್ವವಾಗಿದೆ. ಕಾರ್ಮಿಕರು ಯಾವುದೇ ಹಿಂಜರಿಕೆ ಮಾಡದೆ ತಮ್ಮ ಸಮಸ್ಯೆ, ಸಂಕಷ್ಟಗಳನ್ನು ಅಧಿಕಾರಿಗಳಲ್ಲಿ ಹೇಳಿಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ, ಪೌರಕಾರ್ಮಿಕರು ಆರೋಗ್ಯ ಕಾಪಾಡುವ ಸೈನಿಕರು. ಪೌರಕಾರ್ಮಿಕರದ್ದು ತಿರಸ್ಕೃತ ಕೆಲಸ ಎನ್ನುವ ಕೀಳರಿಮೆ ಸರಿಯಲ್ಲ. ಇದು ಬಹುದೊಡ್ಡ ಕೆಲಸ ಎಂಬುದನ್ನು ಪ್ರಧಾನಿಯವರೇ ಕಸ ಗುಡಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ. ಸ್ವಚ್ಛತೆ ಹಾಗೂ ಆರೋಗ್ಯವಂತ ಸಮಾಜ ಇಂದು ಆಂದೋಲನದ ರೂಪ ಪಡೆದಿರುವುದ ಎಲ್ಲರ ಜವಾಬ್ದಾರಿಯೂ ಹೆಚ್ಚಿದೆ. ಜನರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕುರಿತೂ ಕಾಳಜಿ ವಹಿಸಬೇಕು. ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಒಂದಷ್ಟು ಘೋಷಣೆ, ಜಾಗೃತಿ ಚರ್ಚೆಗಳನ್ನು ಜನರ ಜೊತೆ ಮಾಡಬೇಕು. ಕಸ ವಿಂಗಡಣೆಯ ಆವಶ್ಯಕತೆಯ ಕುರಿತು ಜನರಿಗೆ ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರು.
ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭಾ ಸಹಾಯಕ ಅಭಿಯಂತರ ಅರುಣ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪೌರಕಾರ್ಮಿಕ ರಾಜೀವ ಅವರನ್ನು ಸಮ್ಮಾನಿಸಲಾಯಿತು. ನಗರಸಭೆಯ 50 ಮಂದಿ ಪೌರಕಾರ್ಮಿಕರನ್ನು ಗೌರವಿಸಲಾಯಿತು.
ನಗರಸಭೆ ಕಛೇರಿ ಸಹಾಯಕ ರವೀಂದ್ರ ಕುಮಾರ್ ಸ್ವಾಗತಿಸಿದರು. ಪರಿಸರ ಎಂಜಿನಿಯರ್ ಗುರುಪ್ರಸಾದ್ ಶೆಟ್ಟಿ ವಂದಿಸಿದರು. ನಗರಸಭೆಯ ಕಂದಾಯ ನಿರೀಕ್ಷಕ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button