ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರ ಕೌಶಲ ಅಭಿವೃದ್ದಿ ಕಾರ್ಯಾಗಾರ….

ಪುತ್ತೂರು: ಭಾರತೀಯ ಪಾರಂಪರಿಕ ಶಿಕ್ಷಣ ಪದ್ದತಿಯಾದ ಗುರುಕುಲ ಪದ್ದತಿಯಲ್ಲಿ ಗುರು ಶಿಷ್ಯರ ಸಂಬಂಧ ತುಂಬಾ ಆಳವಾಗಿತ್ತು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ..ಬಿ.ಪಿ.ವೀರಭದ್ರಪ್ಪ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗ, ವಿವೇಕಾನಂದ ಸೆಂಟರ್ ಫಾರ್ ರೀಸರ್ಚ್ ಸ್ಟಡೀಸ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ವಾಣಿಜ್ಯ ವ್ಯವಹಾರ ನಿರ್ವಹಣೆಯಲ್ಲಿ ನೂತನ ದೃಷ್ಟಿಕೋನಗಳು ಮತ್ತು ಸಂಶೋಧನಾ ವಿಧಾನಗಳ ಮಾಹಿತಿ ಎನ್ನುವ ವಿಷಯದ ಬಗ್ಗೆ ಎರಡು ದಿನಗಳ ಉಪನ್ಯಾಸಕರ ಕೌಶಲ ಅಭಿವೃದ್ದಿ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು.
ವಿದ್ಯಾರ್ಥಿಗಳ ಜ್ಞಾನ ದಾಹವನ್ನು ತಣಿಸುವುದಕ್ಕೆ ಉಪನ್ಯಾಸಕರು ತಮ್ಮನ್ನು ತಾವು ಕಾಲಕಾಲಕ್ಕೆ ಉನ್ನತೀಕರಿಸಿಕೊಂಡು ಸನ್ನದ್ಧರಾಗಿರಬೇಕು ಎಂದರು. ಮುಂಬರುವ ಹೊಸ ಶೈಕ್ಷಣಿಕ ಪದ್ದತಿಗಳು ಗುರುಗಳಿಗೆ ನಿಜವಾಗಿಯೂ ಸವಾಲಾಗಿದೆ ಎಂದು ನುಡಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಪಿ.ಎಲ್.ಧರ್ಮ ಮಾತನಾಡಿ ಶಿಕ್ಷಕ ಹುದ್ದೆ ಅತಿ ವಿಶಿಷ್ಟವಾದದ್ದು ಮತ್ತು ಕ್ಲಿಷ್ಟಕರವಾದದ್ದು. ವಿದ್ಯಾರ್ಥಿಯ ಮನವರಿತು ಕಲಿಸುವ ಜವಾಬ್ಧಾರಿ ಶಿಕ್ಷಕರ ಮೇಲಿದೆ ಎಂದರು. ಆದರೆ ಶಿಕ್ಷಕರು ಇಂದು ವೇತನದ ಮಿತಿಗೆ ಕೆಲಸ ಮಾಡುವ ಮನಸ್ಥಿತಿಗೆ ತಲುಪಿದ್ದಾರೆ ಅದರಿಂದ ಹೊರಬಂದು ನಿಜವಾದ ಗುರುವಿನ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ ಉಪನ್ಯಾಸಕರು ತಮ್ಮ ಮೂಲ ವಿಷಯದೊಂದಿಗೆ ಇತರ ವಿಷಯಗಳ ಕುರಿತೂ ಅಧ್ಯಯನವನ್ನು ಮಾಡಬೇಕು ಇದರಿಂದ ಹೊಸ ವಿಷಯಗಳ ಬಗ್ಗೆ ಸಂಶೋಧನೆ ನಡೆಸುವುದಕ್ಕೆ ಸಾಧ್ಯವಾಗುತ್ತದೆ ಎಂದರು. ಕೌಶಲ ಅಭಿವೃದ್ಧಿ ಕಾರ್ಯಾಗಾರಗಳು ಉಪನ್ಯಾಸಕರ ಕರ್ತವ್ಯವನ್ನು ನೆನಪಿಸುವ ಕೆಲಸವನ್ನು ಮಾಡುತ್ತವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಕಾಲೇಜಿಗೆ ವಿವಿಧ ಸ್ಥರದ ವಿದ್ಯಾರ್ಥಿಗಳು ಬರುತ್ತಾರೆ ಅವರಿಗೆ ಸಂಸ್ಕಾರಭರಿತ ಶಿಕ್ಷಣವನ್ನು ನೀಡಿ ಸಮಾಜದ ಪ್ರಜ್ಞಾವಂತ ನಾಗರಿಕರನ್ನಾಗಿಸುವ ಗುರುತರ ಹೊಣೆಗಾರಿಕೆ ಉಪನ್ಯಾಸಕರ ಮೇಲಿದೆ ಎಂದರು. ವಿದ್ಯಾರ್ಥಿಗಳು ತಮ್ಮ ಯೋಜಿತ ಗುರಿಯನ್ನು ತಲುಪುವುದಕ್ಕೆ ಅಗತ್ಯವಾದ ಜ್ಞಾನ ಮತ್ತು ಸ್ಪೂರ್ಥಿಯನ್ನು ನೀಡಿ ಉಪನ್ಯಾಸಕರು ಪ್ರೋತ್ಸಾಹಿಸಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ ಎಂಬಿಎ ವಿಭಾಗದ ಉಪನ್ಯಾಸಕರು ಇದರಲ್ಲಿ ಪಾಲ್ಗೊಂಡರು.

Sponsors

Related Articles

Leave a Reply

Your email address will not be published. Required fields are marked *

Back to top button