ಪುತ್ತೂರು ತಾಲೂಕಿನಲ್ಲಿ `ಜಾಗೃತಿ’ ಬೀದಿನಾಟಕ…..
ಪುತ್ತೂರು: ಸರ್ಕಾರದ ವಿವಿಧ ಯೋಜನೆ-ಸವಲತ್ತುಗಳ ಹಾಗೂ ಆರೋಗ್ಯ ಮತ್ತು ಪರಿಸರ ಸ್ವಚ್ಚತೆಯ ಕುರಿತು ಜನತೆಗೆ ಅರಿವು ಮೂಡಿಸುವ ಕಾರ್ಯಕ್ರಮ ವಾರ್ತಾ ಮತ್ತು ಪ್ರಚಾರ ಇಲಾಖೆಯ ನೇತೃತ್ವದಲ್ಲಿ ಪುತ್ತೂರಿನ ಸಂಸಾರ ಕಲಾ ತಂಡದ ವತಿಯಿಂದ ಪುತ್ತೂರು ತಾಲೂಕಿನ ಆಯ್ದ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ನಡೆಯುತ್ತಿದೆ.
ಗುರುವಾರ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ್ಪುಂಜ, ಅರಿಯಡ್ಕ ಮತ್ತು ಆರ್ಯಾಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪ್ಯದಲ್ಲಿ, ಶುಕ್ರವಾರ ಕಬಕ, ಕೊಡಿಪ್ಪಾಡಿ ಮತ್ತು ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಪುತ್ತೂರಿನ ಸಂಸಾರ ಕಲಾ ತಂಡ ಬೀದಿನಾಟಕ, ಹಾಡು ,ಕುಣಿತ, ನೃತ್ಯಗಳ ಮೂಲಕ ಜನಜಾಗ್ರತಿ ಮೂಡಿಸುವ ಪ್ರಯತ್ನ ನಡೆಸಿದೆ.
ಸಂಸಾರ ಕಲಾ ತಂಡದ ಸಂಚಾಲಕ ಸಂಶುದ್ದೀನ್ ಸಂಪ್ಯ ಅವರ ನೇತೃತ್ವದಲ್ಲಿ, ಉಸ್ತುವಾರಿ ಮೌನೇಶ್ ವಿಶ್ವಕರ್ಮ ಅವರ ನಿರ್ದೇಶನದಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮ ನಡೆಯುತ್ತಿದೆ. ಪತ್ರಕರ್ತರಾದ ಲೋಕೇಶ್ ಬನ್ನೂರು ಮತ್ತು ವಿಷ್ಣುಗುಪ್ತ ಹಾಗೂ ಸುಜೇಶ್ ದರ್ಬೆ, ಪೃಥ್ವೀರಾಜ್ ಕೊಕ್ರಪುಣಿ, ಭವಾನಿ ಕಬಕ, ಜೋಸ್ಲಿನ್ ಪಿಂಟೋ ಬರಿಮಾರು ಅವರು ತಂಡದ ಕಲಾವಿದರಾಗಿ ಅಭಿನಯಿಸುತ್ತಿದ್ದಾರೆ. ಸರ್ಕಾರದ ಯೋಜನೆಗಳು ಹಾಗೂ ಸವಲತ್ತುಗಳ ಕುರಿತು, ಆರೋಗ್ಯ ಮತ್ತು ಪರಿಸರ ಸ್ವಚ್ಚತೆಯ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ಪ್ರದರ್ಶನ ನೀಡಲಾಗುತ್ತಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಿಬ್ಬಂದಿ ವೇಣುಗೋಪಾಲ್ ಸಹಕರಿಸಿದ್ದರು.
ಸೆ.16ರಂದು ಕೋಡಿಂಬಾಡಿ, 34 ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ, ಸೆ.18ರಂದು ಬೆಟ್ಟಂಪಾಡಿ, ಪಾಣಾಜೆ , ನಿಡ್ಪಳ್ಳಿ ಮತ್ತು ಬಲ್ನಾಡು, ಸೆ.18ರಂದು ನರಿಮೊಗ್ರು, ಕೆದಂಬಾಡಿ ಮತ್ತು ಕೆಯ್ಯೂರು, ಸೆ.20ರಂದು ಹಿರೇಬಂಡಾಡಿ,ಬಜತ್ತೂರು, ಕೊೈಲ ಮತ್ತು ರಾಮಕುಂಜದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಲಿದೆ.