ಪುತ್ತೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆ- ಶಾಲಾ ದುರಸ್ತಿ ಪಟ್ಟಿಯಲ್ಲಿ ತಾರತಮ್ಯ ಆರೋಪ…..
ಪುತ್ತೂರು: ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ತಾಲೂಕಿನ 38 ಶಾಲೆಗಳ ದುರಸ್ಥಿ ಬಗ್ಗೆ ಮಾತ್ರ ಮೇಲಾಧಿಕಾರಿಗಳಿಗೆ ಪಟ್ಟಿ ಕಳುಹಿಸಲಾಗಿದೆ. ಆದರೆ ತಾಪಂ ಸದಸ್ಯರು ಶಾಲಾ ಸಮಸ್ಯೆಗಳ ಪ್ರಸ್ತಾಪಿಸಿರುವ ಯಾವುದೇ ಶಾಲೆಗಳನ್ನು ಸೇರಿಸಿಲ್ಲ. ಇದರಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಪುತ್ತೂರು ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ಅವರನ್ನು ತಾಪಂ ಸದಸ್ಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ತಾಪಂ ಸಾಮಾನ್ಯಸಭೆ ಬುಧವಾರ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅತ್ಯಂತ ಸಮಸ್ಯೆಯಾಗಿರುವ, ಕುಸಿದು ಬೀಳುವ ಹಂತದಲ್ಲಿರುವ ಕಡಬ ತಾಲೂಕಿನ ಪ್ರಾಥಮಿಕ ಶಾಲೆಗಳಾದ ಪಲ್ಲತ್ತಾರು, ನೇರ್ಲ, ಅಡ್ಡೋಳೆ, ಕೊಣಾಲು ಪ್ರೌಢಶಾಲೆ ಬಗ್ಗೆ ಕಳೆದ 6 ತಿಂಗಳಿನಿಂದ ತಾಪಂ ಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದೇವೆ. ಆದರೆ ಕ್ಷೇತ್ರಶಿಕ್ಷಣಾಧಿಕಾರಿ ಅವರ ಪಟ್ಟಿಯಲ್ಲಿ ಈ ಶಾಲೆಗಳ ಹೆಸರೇ ಇಲ್ಲ ಎಂದು ಸದಸ್ಯರಾದ ಕೆ.ಟಿ.ವಲ್ಸಮ್ಮ, ಉಷಾಅಂಚನ್, ಜಿಪಂ ಸದಸ್ಯರಾದ ಪಿ.ಪಿ.ವರ್ಗೀಸ್, ಸವೋತ್ತಮ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಶಾಲೆಗಳ ಬಗ್ಗೆ ಮುಖ್ಯಗುರುಗಳು ತಿಳಿಸಿಲ್ಲ. ಕೇವಲ 38 ಶಾಲೆಗಳ ತುರ್ತು ದುರಸ್ಥಿ ಬಗ್ಗೆ 1.93ಕೋಟಿಯ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಅವರ ಹೇಳಿಕೆ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಸುಳ್ಳು ಮಾಹಿತಿ ನೀಡಬೇಡಿ. ಮಾಹಿತಿ ನೀಡದಿದ್ದರೆ ಅಂತಹ ಮುಖ್ಯಗುರುಗಳ ಬಗ್ಗೆ ಕ್ರಮ ಕೈಗೊಳ್ಳಿ. ಶಾಲೆಗಳು ಕುಸಿದುಬಿದ್ದರೆ ಮಕ್ಕಳಿಗೆ ರಕ್ಷಣೆ ಯಾರು ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅತೀ ಅಗತ್ಯದ ಶಾಲೆಗಳಿಗೆ ಆಧ್ಯತೆ ನೀಡಿ ಹೊಸ ಪಟ್ಟಿ ತಯಾರಿಸಿ. ಈ ಕೆಲಸ 2 ದಿನಗಳಲ್ಲಿ ನಡೆಯಬೇಕು ಎಂದು ಅಧಿಕಾರಿಗೆ ಸೂಚಿಸಿದರು.
ಕಡಬ ಭಾಗದಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಇಲ್ಲಿನ ಗ್ರಾಮೀಣ ಜನತೆ ರೂ.10 ಮೌಲ್ಯ ಪಹಣಿ ಪತ್ರ ಪಡೆಯಲು ರೂ.300 ವೆಚ್ಚಮಾಡಬೇಕಾಗುತ್ತದೆ. ತಾಪಂ ಸಭೆಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ಉದನೆಯಲ್ಲಿ ಎಲ್ಲಾ ಬಸ್ಸುಗಳು ನಿಲ್ಲುತ್ತವೆ ಎಂದು ಮಾಹಿತಿ ನೀಡುತ್ತಾರೆ. ಆದರೆ ಅಲ್ಲಿ ಒಂದು ಬಸ್ಸು ಹೊರತುಪಡಿಸಿ ಬೇರೆ ಯಾವುದೇ ಬಸ್ಸುಗಳನ್ನು ನಿಲುಗಡೆ ಇಲ್ಲ. ಬಸ್ಪಾಸ್ ವಿಷಯದಲ್ಲೂ ಕೆಲವು ಬಸ್ಸಿನ ನಿರ್ವಾಹಕರು ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸದಸ್ಯರಾದ ಕೆ.ಟಿ.ವಲ್ಸಮ್ಮ ಮತ್ತು ಉಷಾ ಅಂಚನ್ ಆರೋಪಿಸಿದರು. ಈ ಕುರಿತು ಬಸ್ಸಿನ ನಿರ್ವಾಹಕರಿಗೆ ಸರಿಯಾದ ಸೂಚನೆ ನೀಡುವಂತೆ ಸೂಚಿಸಿದ ಅಧ್ಯಕ್ಷರು ಒಂದು ತಿಂಗಳ ಒಳಗಾಗಿ ಶಾಸಕರ ನೇತೃತ್ವದಲ್ಲಿ ಕೆಎಸ್ಸಾರ್ಟಿಸಿ ಸಮಸ್ಯೆ ಬಗ್ಗೆ ಸಭೆಯನ್ನು ಕಡಬದಲ್ಲಿ ಕರೆಯಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ತಾಪಂ ಉಪಾಧ್ಯಕ್ಷೆ ಲಲಿತಾ ಈಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಹಶೀಲ್ದಾರ್ ಅನಂತಶಂಕರ್, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಇದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ ವಂದಿಸಿದರು.