ಪುತ್ತೂರು ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ….

ಪುತ್ತೂರು: ತನ್ನ ವೈಭವಯುತ ಕೌಶಲ್ಯದ ಮೂಲಕ ವಿಶ್ವವನ್ನೇ ಭಾರತದ ಕಡೆಗೆ ಆಕರ್ಷಿಸಿದ ವಿಶ್ವಕರ್ಮರ ಕೈಚಳಕ
ಭಾರತದ ಎಲ್ಲಾ ಮಠ ಮಂದಿರ ಸೇರಿದಂತೆ ಧಾರ್ಮಿಕ ಸ್ಥಳ ಹಾಗೂ ಇನ್ನಿತರ ಸ್ಥಳಗಳಲ್ಲಿವೆ. ಶಿಲ್ಪ ನಿರ್ಮಾಣ ಕಾಯಕದ ಮುಖಾಂತರ ಬದುಕು ಕಟ್ಟಿಕೊಂಡಿರುವ ವಿಶ್ವಕರ್ಮದ ಸಮಾಜದ ಕುಶಲಕರ್ಮಿಗಳು ಮತ್ತು ಶಿಲ್ಪಕಲಾ ಸಾಧಕರಿಗೆ ಜಕಣಾಚಾರ್ಯ ಪ್ರಶಸ್ತಿ ನೀಡುವ ಬಗ್ಗೆ ಸರ್ಕಾರದಿಂದ ಚಿಂತನೆ ನಡೆಯಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಮರಣಾ ಉಪನ್ಯಾಸ ಮಾಡಿದ ಮೂಡಬಿದ್ರೆ ಸರ್ಕಾರಿ ಪ್ರೌಢಶಾಲಾ ಅಧ್ಯಾಪಕ ಕುಂಜೂರು ಗಣೇಶ್ ಆಚಾರ್ಯ ಅವರು, ವೇದಗಳಲ್ಲಿ ನಿರ್ಗುಣನಾದ ವಿಶ್ವಕರ್ಮ ಅವರನ್ನು ಇಂದು ಸಗುಣವಾಗಿ ಪೂಜೆ ಮಾಡಲಾಗುತ್ತಿದೆ. ಜಗತ್ತಿನ ವಿಚಾರದಲ್ಲಿ ರಾಷ್ಟ್ರಪತಿ ಯಂತೆ ಕೆಲಸ ಮಾಡುವ ವಿಶ್ವಕರ್ಮ ಜಗತ್ತಿಗೆ ಯಜ್ಞದ ಚಿಂತನೆಯನ್ನು ನೀಡಿದವರು. ಸಾಮಾಜಿಕ ನೆಲೆಯಲ್ಲಿ ಶಿಲ್ಪಕ್ಕೆ ಉನ್ನತಮಟ್ಟದ ನೆಲೆ, ಧಾರ್ಮಿಕ ನೆಲೆಗಟ್ಟಿನಲ್ಲಿ ಧರ್ಮದ ತಳಹದಿ, ಶೈಕ್ಷಣಿಕವಾಗಿ ಅಧ್ಯಯನ ನೆಲೆ ಹಾಗೂ ಆರ್ಥಿಕತೆಯಲ್ಲಿ ಸ್ವಾವಲಂಬನೆಯನ್ನು ಉಂಟು ಮಾಡುವ ಚಿಂತನೆಗಳು ವಿಶ್ವಕರ್ಮರ ಕೊಡುಗೆಯಾಗಿದೆ. ಆದರೆ ಜಾಗತೀಕರಣ ಫಲವಾಗಿ ಇಂದು ವಿಶ್ವಕರ್ಮ ಸಮಾಜದ ಅನ್ನಕ್ಕೂ ತತ್ವಾರ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ವೈವಿಧ್ಯತೆ ಮತ್ತು ನವೀನತೆ ಇಲ್ಲದ ಯಾಂತ್ರೀಕೃತ ಆಭರಣಗಳ ತಯಾರಿಯಿಂದ ಶಿಲ್ಪ ಮತ್ತು ಶಿಲ್ಪಿ ನಡುವಣ ಭಾಂದವ್ಯವೂ ಕಡಿದುಹೋಗಿದೆ ಎಂದರು. ಹಳ್ಳಿಯಲ್ಲಿರುವ ಕಮ್ಮಾರ, ಬಡಗಿ, ನೇಕಾರ, ಕಲ್ಲುಕುಟಿಗ, ಕಮ್ಮಾರ ಇಂತಹ ಕುಶಲಕರ್ಮಿ ಶಿಲ್ಪಿಗಳ ಸಾಧಕರನ್ನು ಗುರುತಿಸಿ ಅಂತವರಿಗೆ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡುವಂತಾಗಬೇಕು. ಇದು ಸಮಾಜದಲ್ಲಿ ಈ ವೃತ್ತಿಯ ಜನತೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪಾಧ್ಯಕ್ಷೆ ಲಲಿತಾ ಈಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಾಪಂ ಕಾರ್ಯನಿರ್ವಗಣಾಧಿಕಾರಿ ನವೀನ್ ಭಂಡಾರಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಟುಪ್ರಸಾದ್ ಉಪಸ್ಥಿತರಿದ್ದರು.
ಉಪ ತಹಶೀಲ್ದಾರ್ ರಾಮಣ್ಣ ನಾಯ್ಕ್ ಸ್ವಾಗತಿಸಿದರು. ಕಂದಾಯ ಇಲಾಖೆಯ ಪ್ರಥಮದರ್ಜೆ ಗುಮಾಸ್ತ ದಯಾನಂದ ಹೆಗ್ಡೆ ವಂದಿಸಿದರು. ಕಂದಾಯ ಇಲಾಖಾ ಸಿಬಂದಿ ನಾಗೇಶ್ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button